ಬಾಳೆಹೊನ್ನೂರು: ಭತ್ತ ನಾಟಿಗೆ ಸಿದ್ಧವಾಗಿರುವ ಗದ್ದೆ, ಅಲ್ಲಿ ನೆರೆದಿದ್ದ ನೂರಾರು ಜನರಿಂದ ಶಿಳ್ಳೆ, ಕೇಕೆಯ ಹಷೋದ್ಗಾರ. ಗೆಲ್ಲಬೇಕೆಂಬ ಛಲ, ಆಗಾಗ ಸುರಿಯುತ್ತಿದ್ದ ಜಿಡಿಜಿಡಿ ಮಳೆಯಲ್ಲೂ ಕುಂದದ ಉತ್ಸಾಹ...
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕಂಡಬಂದ ದೃಶ್ಯಗಳಿವು. ಈ ಮೂಲಕ ಯುವ ಸಮೂಹವನ್ನು ಕೃಷಿಯೆಡೆಗೆ ಆಕರ್ಷಿಸುವ ಪ್ರಯತ್ನವೂ ನಡೆಯಿತು. ವಿಜೇತರಿಗೆ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಯಿತು.
ಬಾಳೆಹೊನ್ನೂರಿನ ಎಂ.ಎಸ್.ಅರುಣೇಶ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಗಳು ಕ್ರೀಡಾಭಿಮಾನಿಗಳ ಮೈನವಿರೇಳಿಸಿತು. ಕ್ರೀಡೆಗಳು ಆರಂಭಗೊಳ್ಳುತ್ತಿದ್ದಂತೆ ಜಮಾಯಿಸಿದ ಜನರು ಆಗಾಗ ಮಳೆ ಸುರಿಯುತ್ತಿದ್ದರೂ ಕೊನೆಯವರೆಗೂ ಆಟಗಾರರನ್ನು ಹುರಿದುಂಬಿಸಿದರು. ಶಿಳ್ಳೆ, ಕೇಕೆಗಳು ಮಾರ್ದನಿಸಿದವು. ಹಗ್ಗಜಗ್ಗಾಟ ಹಾಗೂ ವಾಲಿಬಾಲ್, ಟಿ2 ಕ್ರಿಕೆಟ್ ಪಂದ್ಯಾವಳಿಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. ಸ್ಪರ್ಧಾಳುಗಳು ಕೆಸರಿನಲ್ಲಿ ಮಿಂದೆದ್ದು ಗೆಲುವಿಗಾಗಿ ಎದುರಾಳಿಗಳೊಂದಿಗೆ ಸೆಣಸಿದರು. ನೆರೆದಿದ್ದವರೆಲ್ಲರೂ ಕೆಸರಿನಲ್ಲಿ ಮಿಂದೆದ್ದು ಸ್ವಾತಂತ್ರ್ಯೊತ್ಸವವನ್ನು ಆನಂದಿಸಿದರು