ಅಥಣಿ ಗ್ರಾಮೀಣ: ಮಾನಸಿಕ ಆರೋಗ್ಯ ಕಾಪಾಡಲು ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪೂರಕವಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಮನರಂಜನೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ಖುಷಿಯಾಗಿರುವುದರಿಂದ ಉತ್ತಮ ವ್ಯಕ್ತಿಯಾಗಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಜನಪದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಡಾ.ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಯುವಜನಾಂಗ ಸಂಸ್ಕೃತಿ, ಸಂಸ್ಕಾರದ ಜತೆಗೆ ಗುಣಮಟ್ಟ ಶಿಕ್ಷಣ ಪಡೆಯಬೇಕು ಎಂದರು. ದುರ್ಗಾದೇವಿ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಪಲ್ಲಕ್ಕಿ ಮೆರವಣಿಗೆ ಜರುಗಿತು.
ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಖೋತ, ರವಿ ದೊಡಮನಿ, ಆನಂದ ಮಾದರ, ಚಿದಾನಂದ ಭಜಂತ್ರಿ, ಮುರೆಪ್ಪ ಬಣಜ, ಯಲ್ಲಪ್ಪ ಭಜಂತ್ರಿ, ನಾಗೇಶ ದಡಕೆ, ಯಶವಂತ ಪೋಳ, ರಾಜಕುಮಾರ ತೊಟಗಿ, ಭರತೇಶ ರೊಡ್ಡ, ಅಜಿತ್ ಭಜಂತ್ರಿ ಇತರರಿದ್ದರು.