ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಬಸವೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಸೋಮನಗೌಡ (ಅಪ್ಪುಗೌಡ) ಪಾಟೀಲ ಮನಗೂಳಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾತ್ರೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತರು ಭಾಗವಹಿಸುತ್ತಾರೆ. ಭಕ್ತರಿಗೆ ಕುಡಿಯುವ ನೀರು ಪ್ರಸಾದದ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಈಗಾಗಲೇ ದೇವಸ್ಥಾನ ಸಮಿತಿ ಕೈಗೊಂಡಿದೆ. ಪ್ರತಿವರ್ಷದಂತೆ ಈ ವರ್ಷವು ಕೂಡಾ ಶ್ರಾವಣ ಮಾಸದ ಶುಕ್ರವಾರದಿಂದ ಸೋಮವಾರದವರೆಗೆ ನಾಲ್ಕು ದಿನಗಳ ಕಾಲ ಬಸವೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.
ಸೆ. 8ರಿಂದ 11ರವರೆಗೆ ನಾಲ್ಕು ದಿನಗಳ ಕಾಲ ಸಂಭ್ರಮದಿಂದ ಬಸವೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ಸೆ. 8ರಂದು ಶುಕ್ರವಾರ ಬೆಳಗ್ಗೆ ದೇವಸ್ಥಾನದ ಸಿದ್ದಯ್ಯ ಮಠಪತಿ ಹಾಗೂ ರುದ್ರಯ್ಯ ತಂಬೂರಿ ಹಾಗೂ ಮನಗೂಳಿ ಅರ್ಚಕರ ನೇತೃತ್ವದಲ್ಲಿ ಬಸವೇಶ್ವರ ಹಾಗೂ ಸಂಗಮನಾಥಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಜರುಗಲಿದೆ. ಮಧ್ಯಾಹ್ನ 1ಕ್ಕೆ ಮನಗೂಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಪಂ ಕಾರ್ಯಾಲಯದಿಂದ ಮಧ್ಯಾಹ್ನ 3ಕ್ಕೆ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಅಪ್ಪುಗೌಡ ಪಾಟೀಲ ಅವರ ನೇತೃತ್ವದಲ್ಲಿ ಬಸವೇಶ್ವರ ರಥದ ಕಳಸದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಂದಿಕೋಲು ಹಾಗೂ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ರಾತ್ರಿ 7.30ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಮದ್ದು ಸುಡಲಾಗುವುದು.
ಸೆ. 9ರಂದು ಬೆಳಗ್ಗೆ 10ಕ್ಕೆ ದೇವಸ್ಥಾನದ ಆವರಣದಲ್ಲಿ ವಿಜಯಪುರ ಹಾಗೂ ವಿವಿಧ ಜಿಲ್ಲೆಯ ಜಾನಪದ ಕಲಾ ತಂಡಗಳಿಂದ ಜಾನಪದ ಜಾತ್ರೆ ಜರುಗುವುದು. ಮಧ್ಯಾಹ್ನ 2ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಭಾರ ಎತ್ತುವ ಸ್ಪರ್ಧೆ, ಸಂಜೆ 4ಕ್ಕೆ ಜಂಗಿ ಕುಸ್ತಿ, ರಾತ್ರಿ 8ಕ್ಕೆ ನಗೆಹಬ್ಬ ಜರುಗಲಿದೆ.
ಸೆ. 10ರಂದು ರಾತ್ರಿ 10ಕ್ಕೆ ತಾಯಿಯ ಕಣ್ಣೀರು ನಾಟಕ ಪ್ರದರ್ಶನಗೊಳ್ಳಲಿದೆ. ಸೆ. 11ರಂದು ಸಂಜೆ 5ಕ್ಕೆ ರಥೋತ್ಸವ ಹಾಗೂ ಕಳಸ ವಿಸರ್ಜನೆ, ಪಲ್ಲಕ್ಕಿ ಉತ್ಸವ, ಐದು ದಿನಗಳ ಕಾಲ ಜಾತ್ರೆಗೆ ಆಗಮಿಸುವ ಭಕ್ತರು ನಿರಂತರ ಅನ್ನಪ್ರಸಾದವಿರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಎಸ್. ಕುಲಕರ್ಣಿ, ಜಿಣೇಶ ಗೊಂಗಡಿ, ವಿಠ್ಠಲ ಸಿಂಧೆ, ಈರಪ್ಪ ಹುಣಸಿಕಟ್ಟಿ, ಸಂಗಯ್ಯ ಕಂದಗಲ್ಲಮಠ, ಬಸವರಾಜ ಬಿರಾದಾರ, ಪರಸಪ್ಪ ಬನ್ನಟ್ಟಿ, ಗೋವಿಂದ ಚನಹಾಳ, ಸಿದ್ದಪ್ಪ ಹಾವನ್ನವರ, ವೈಭವ ಜಂಗಮಶೆಟ್ಟಿ ಇತರರಿದ್ದರು.