ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀ ಪ್ರಭು ಮಹಾಸ್ವಾಮಿಗಳು, ಶ್ರೀ ಜನಾರ್ಧನ ಮಹಾರಾಜರು, ನಿವೃತ್ತ ವಲಯ ಅರಣ್ಯಾಧಿಕಾರಿ ವಾಸುದೇವ ಇಗವೆ ಇತರರಿದ್ದರು. 
ಜಿಲ್ಲೆ

ಮನುಕುಲದ ಉಳಿವಿಗೆ ಪರಿಸರ ರಕ್ಷಣೆ ಅಗತ್ಯ

ಚಿಮ್ಮಡ: ಮನುಕುಲ, ಪಕ್ಷಿ ಸಂಕುಲ ಸೇರಿ ಸಕಲ ಜೀವರಾಶಿಗಳ ಉಳಿವಿಗೆ ಹಸಿರು ಪರಿಸರ ಕಾಪಾಡಿಕೊಳ್ಳುವ ಅಗತ್ಯತೆ ಹೆಚ್ಚಿದೆ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.

ಗ್ರಾಮದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಿವೃತ್ತ ವಲಯ ಅರಣ್ಯಾಧಿಕಾರಿ ವಾಸುದೇವ ಇಗವೆ ಅವರು ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಭಿವೃದ್ಧಿ, ಆಧುನಿಕತೆಯ ಭರಾಟೆಯಲ್ಲಿ ಲಕ್ಷಾಂತರ ಗಿಡ, ಮರಗಳನ್ನು ಕಡಿದು ಹಾಕಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಸಾವಿರಾರು ಗಿಡಗಳನ್ನು ನೆಡಲಾಗುತ್ತಿದೆ. ಆದರೆ, ಅವುಗಳ ಪೋಷಣೆ ಮಾಡದ್ದರಿಂದ ಶೇ. 90 ರಷ್ಟು ಗಿಡಗಳು ಹಾಳಾಗುತ್ತಿವೆ. ಇಂಥಹ ಸಂಧರ್ಬದಲ್ಲಿ ವಾಸುದೇವ ಅವರು ನಿವೃತ್ತಿ ಹೊಂದಿದ್ದರೂ ಪರಿಸರ ಬೆಳೆಸುವ ಅವರ ಕಾಳಜಿ ಮಾದರಿಯಾಗಿದೆ ಎಂದರು.

ಸ್ಥಳೀಯ ರಘುನಾಥಪ್ರಿಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ, ಗ್ರಾಮದ ಯುವಕರ ಕಾಳಜಿಯಿಂದ ಗ್ರಾಮದ ಬಂಜರು ಪ್ರದೇಶ ಇಂದು ಹಸಿರು ತಾಣವಾಗಿದೆ. ಗುಡ್ಡದ ದೇವಸ್ಥಾನ ವಣಸಿರಿ ಪ್ರಭುಲಿಂಗೆಶ್ವರ ದೇವಸ್ಥಾನವಾಗಿದೆ ಎಂದು ಹೇಳಿದರು.

ನಿವೃತ್ತ ವಲಯ ಅರಣ್ಯಾಧಿಕಾರಿ ವಾಸುದೇವ ಇಗವೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಭುಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನೆಡಲಾಗಿರುವ 1,500 ಗಿಡಗಳ ಜಾತಿ, ಅವುಗಳಿಂದ ಮನುಕುಲಕ್ಕೆ ದೊರೆಯುವ ಲಾಭಗಳ ಕುರಿತು ವಿವರಿಸಿದರು.

ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಬಸವರಾಜ ಬಳಗಾರ, ಪತ್ರಕರ್ತ ಇಲಾಹಿ ಜಮಖಂಡಿ ಇತರರಿದ್ದರು.
ಪರಿಸರ ರಕ್ಷಣೆಗೆ ನೆರವಾದ ಹಲವು ಮಹನಿಯರನ್ನು ಸನ್ಮಾನಿಸಲಾಯಿತು.