ಜಿಲ್ಲೆ

ಮನ ತಣಿಸಿದ ಸಂಗೀತ

ಧಾರವಾಡ: ಪ್ರಾರಂಭದಲ್ಲಿ ಸಾಮೂಹಿಕ ಸರೋದ್ ವಾದನ ಬಳಿಕ ತಬಲಾ ಸೋಲೋ, ಗಾಯನ ಮತ್ತೆ ಸರೋದ್ ವಾದನ.. ಇವೆಲ್ಲವೂ ಪ್ರೇಕ್ಷಕರ ಮನ ತಣಿಸಿತು.

ಗಾನಪ್ರದೀಪ ಪಂ. ಬಸವರಾಜ ಗೋನಹಾಳು ಸ್ಮರಣಾರ್ಥ ಆಲಾಪ ಸಂಗೀತ ಪ್ರಭಾ ವತಿಯಿಂದ ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ದಿಗ್ವಿಜಯ 24*7 ನ್ಯೂಸ್ ಚಾನಲ್ ಮಾಧ್ಯಮ ಸಹಯೋಗ, ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರ ಹಾಗೂ ಇತರ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.

ವಿಜಯ ಗೋನಹಾಳು ಶಿಷ್ಯಂದಿರಾದ (ಕಿರಿಯರ ವಿಭಾಗ) ಸುಧಾ, ಪ್ರಿಯಾ, ರಮ್ಯಾ, ಶ್ರೇಯಾ, ಮೀನಾ, ಪ್ರೀತಾ, ವಿನೀತಾ, ಪ್ರಿಯದರ್ಶಿನಿ, ರವೀಂದ್ರ, ಹೇಮಂತ ರಂಜನ್, ರಿಷಬ್, ಸ್ಪರ್ಷದ್, ಪ್ರಣವ್ ಟಿ., ರಾಮಕೃಷ್ಣ, ನಿನಾದ ಹಾಗೂ ಪೃಥ್ವಿ ಅವರ ಸಮೂಹ ಸರೋದ್ ವಾದನದೊಂದಿಗೆ ಸಂಗೀತ ಸುಧೆಗೆ ಚಾಲನೆ ನೀಡಲಾಯಿತು. ಅವರಿಗೆ ವಿಕಾಸ ನರೇಗಲ್ ತಬಲಾ ಸಾಥ್ ನೀಡಿದರು. ಆಹೀರ ಭೈರವ ರಾಗದಲ್ಲಿ ವಿಲಂಬಿತ್, ಮಧ್ಯ ಹಾಗೂ ಧೃತ್ ತೀನತಾಲ್ ನುಡಿಸುವ ಮೂಲಕ ಶ್ರೋತ್ರುಗಳನ್ನು ರಂಜಿಸಿದರು.

ನಂತರ ಉಸ್ತಾದ್ ನಿಸಾರ್ ಅಹ್ಮದ್ ಅವರು ತಬಲಾ ಸೋಲೊದಲ್ಲಿ ತೀನತಾಲ್ ಹಾಗೂ ವಿವಿಧ ತಾಳಗಳನ್ನು ನುಡಿಸಿದರು. ಅವರಿಗೆ ಅರಣ್ಯಕುಮಾರ ಇಸ್ರಾಜ್​ನಲ್ಲಿ ಸಾಥ್ ನೀಡಿದರು. ವಿಜಯ ಅವರ ಹಿರಿಯ ಶಿಷ್ಯಂದಿರಾದ ಅರ್ಜುನ ಆನಂದ, ನವ್ಯ ರುದ್ರಪ್ಪ, ಪ್ರಣವರಾವ್, ಪ್ರತೀಕ್ಷಾ ಹೂಗಾರ ಸಾಮೂಹಿಕ ಸಿತಾರ್ ವಾದನ ಪ್ರಸ್ತುತಪಡಿಸಿದರು. ಅವರಿಗೆ ಪ್ರಶಾಂತ ಹಾರೋಗೇರಿ ತಬಲಾ ಸಾಥ್ ನೀಡಿದರು. ಸಮೂಹ ವಾದನಕ್ಕೆ ತಲೆದೂಗಿದ ಪ್ರೇಕ್ಷಕ ವೃಂದ ಕರತಾಡನ ಮೊಳಗಿಸಿತು.

ಪ್ರಿಯಾ ಪುರಷೋತ್ತಮ ಅವರು ಮುಲ್ತಾನಿ ರಾಗದ ಮೂಲಕ ಸಂಗೀತ ಕಛೇರಿ ಪ್ರಾರಂಭಿಸಿ ಹೇಮಂತ್ ರಾಗದೊಂದಿಗೆ ಸಂಪನ್ನಗೊಳಿಸಿದರು. ಅವರಿಗೆ ಶ್ರುತೀಂಧ್ರ ಕಟಗಡೆ ತಬಲಾ ಹಾಗೂ ಬಸವರಾಜ ಹಿರೇಮಠ ಹಾಮೋನಿಯಂ ಸಾಥ್ ನೀಡಿದರು. ಬಳಿಕ ವಿಜಯಕುಮಾರ ಗೋನಹಾಳು ಅವರು ಮಾರ್ವಾ ರಾಗದಲ್ಲಿ ಸಿತಾರ್ ಪ್ರಸ್ತುಪಡಿಸಿದರು. ಅವರಿಗೆ ಪುಟ್ಟರಾಜ ಗೋನಹಾಳು ತಬಲಾ ಸಾಥ್ ನೀಡಿದರು. ಪಂ. ರೋಣು ಮುಜುಂದಾರ್ ಅವರ ಬಾನ್ಸುರಿ ವಾದನದೊಂದಿಗೆ ಸಂಗಿತ ಕಾರ್ಯಕ್ರಮ ಸಂಪನ್ನಗೊಂಡಿತು. ಮುಜುಂದಾರ್ ಅವರಿಗೆ ಪಂ. ರಾಜೇಂದ್ರ ನಾಕೋಡ ತಬಲಾ ಸಾಥ್ ನೀಡಿದರು.

ಪಂ. ಬಸವರಾಜ ಗೋನಹಾಳು ಮೇರು ವ್ಯಕ್ತಿತ್ವದವರು

ಸಂಗೀತಕ್ಕೂ ಪೂರ್ವದಲ್ಲಿ ನಡೆದ ಉದ್ಘಾಟನೆ ಸಮಾರಂಭದಲ್ಲಿ ವಯೋಲಿನ್ ವಾದಕ ಪಂ. ಬಿ.ಎಸ್. ಮಠ ಮಾತನಾಡಿ, ಪಂ. ಬಸವರಾಜ ಅವರು ನನ್ನ ಆತ್ಮೀಯ ಗುರು. ಮೇರು ವ್ಯಕ್ತಿತ್ವ ಹೊಂದಿದ್ದ ಅವರು, ಅತ್ಯಂತ ಸರಳವಾಗಿ ಜೀವನ ನಡೆಸಿದವರು. ತಮ್ಮಂತೆಯೇ ತಮ್ಮ ಮಕ್ಕಳಿಗೂ ಸಂಗೀತ ವಿದ್ಯೆ ನೀಡಿ ಉತ್ತಮ ಕಲಾವಿದರನ್ನಾಗಿ ಸಿದ್ಧ ಮಾಡಿದ್ದಾರೆ ಎಂದರು.

ಪ್ರೊ. ಮಲ್ಲಿಕಾರ್ಜುನ ತರ್ಲಘಟ್ಟಿ ಮಾತನಾಡಿ, ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಅನೇಕ ಮಹನೀಯರು ಸಂಗೀತ ಶಿಕ್ಷಣ ಪಡೆದಿದ್ದಾರೆ. ಅದರಲ್ಲಿ ಪಂ. ಬಸವರಾಜ ಗೋನಹಾಳು ಅವರೂ ಒಬ್ಬರು. ಅಲ್ಲಿ ಶಿಕ್ಷಣ ಪಡೆದ ಅವರು ಆಕಾಶವಾಣಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಜ್ಯೋತಿ ಗೋನಹಾಳು, ಅಕ್ಕಮಹಾದೇವಿ ಮಠ, ಗೋನಹಾಳು ಕುಟುಂಬಸ್ಥರು, ಇತರರು ಇದ್ದರು. ಮಧುಕರ ಕಳಸಾಪುರ ನಿರೂಪಿಸಿದರು.