ಹಾಸನ : ವಿವಿಧ ಸರ್ಕಾರಿ ಕಚೇರಿಗಳಲ್ಲಿರುವ ಮಧ್ಯವರ್ತಿಗಳಿಗೆ ಬೆಲೆ ಇದೆ. ಆದರೆ ಪುರಸಭೆ ಸದ್ಯರಾದ ನಮಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಪುರಸಭೆ ಸದಸ್ಯ ಜಿ.ಶಾಂತಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೇಲೂರು ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಅಧ್ಯಕ್ಷತೆಯಲ್ಲಿ ಶನಿವಾರ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದರೆ ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. ಯಾವುದಾದರೂ ಕೆಲಸ ಕಾರ್ಯಗಳಿಗೆ ಹೋದ ಸಂದರ್ಭದಲ್ಲೂ ಗೌರವವಿಲ್ಲ. ತಾಲೂಕು ಕಚೇರಿಯಲ್ಲಿ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರದ ಬಗ್ಗೆ ಕೇಳಿದರೆ ಇಲ್ಲಸಲ್ಲದ ಸಬೂಬು ಹೇಳುತ್ತಾರೆ. ಪಟ್ಟಣದಲ್ಲಿ 40 ಮನೆಗಳು ಮಳೆಯಿಂದ ಹಾನಿಯಾಗಿವೆ. ಆದರೆ 3 ಮನೆಗೆ ಮಾತ್ರ ಅಲ್ಪಸ್ವಲ್ಪ ಪರಿಹಾರ ನೀಡಿದ್ದಾರೆ. ಕೇಳಿದರೆ ಮನೆಯಲ್ಲಿ ವಾಸವಿದ್ದ ಮನೆಗಳು ಹಾನಿಯಾದರೆ ಮಾತ್ರ ಪರಿಹಾರ ನೀಡಲಾಗುತ್ತದೆ ಎನ್ನುತ್ತಾರೆ. ಮನೆ ಬಿದ್ದಿರುವುದಕ್ಕೆ ಚಿತ್ರ ಮತ್ತಿತರ ದಾಖಲೆಗಳಿದ್ದರೂ ಪರಿಹಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಿಸಿ ಜಲ್ಲಿ ಹಾಕಲಾಗುತ್ತಿದೆ. ಆದರೆ ಈ ಬಗ್ಗೆ ಪುರಸಭೆಗೆ ಮಾಹಿತಿ ಇಲ್ಲ. ಜೋರಾಗಿ ಮಳೆ ಬಂದರೆ ಮಳೆ ನೀರೆಲ್ಲ ಅಕ್ಕಪಕ್ಕದ ಮನೆಗೆಯೊಳಗೆ ಹೋಗುತ್ತದೆ. ಮೊದಲು ಚರಂಡಿ ನಿರ್ಮಿಸಿ. ನಂತರ ರಸ್ತೆ ಕೆಲಸ ಮಾಡಬೇಕು. ಪುರಸಭೆ ಜಾಗದಲ್ಲಿ ಆಟೋ ಮತ್ತು ಕಾರ್ ಪಾರ್ಕಿಂಗ್ ನಿಲ್ದಾಣದ ಛಾವಣಿ ಕ್ರಮಬದ್ಧವಾಗಿ ನಿರ್ಮಿಸಿಲ್ಲ. ಇದಕ್ಕೆ ಪುರಸಭೆಯಿಂದ ಅನುಮತಿ ಪಡೆದಿದ್ದಾರೆಯೇ? ಬಡವರು ಸಣ್ಣ ಕೆಲಸಕ್ಕೆ ಎನ್‌ಒಸಿ ಕೇಳಿದರೆ ಕೊಡಲ್ಲ. ಬೇರೆ ಇಲಾಖೆಯವರು ಪುರಸಭೆ ಅನುಮತಿ ಪಡೆಯದೆ ಕೆಲಸ ಮಾಡಿದರೆ ಯಾರೂ ಹೊಣೆ ಎಂದು ಪ್ರಶ್ನಿಸಿದರು.
ಸೆಸ್ಕ್ ಕಚೇರಿಗೆ ಪ್ರತಿ ತಿಂಗಳು ಪುರಸಭೆಯಿಂದ ಲಕ್ಷಾಂತರ ರೂ. ಶುಲ್ಕ ಕಟ್ಟುತ್ತೇವೆ. ಪಟ್ಟಣದಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬ ಬದಲಾಯಿಸಿ ಎಂದರೆ ಮಾಡುವುದಿಲ್ಲ ಮತ್ತೆ ಏಕೆ ಶುಲ್ಕ ಕಟ್ಟಬೇಕು. ಈ ಬಗ್ಗೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಶೀಘ್ರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಮಾತನಾಡಿ, ಈ ಎಲ್ಲ ವಿಷಯಗಳಿಗೂ ಸಂಬಂಧಿಸಿದಂತೆ ಶೀಘ್ರದಲ್ಲೇ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಸದಸ್ಯರ ಸಮ್ಮುಖದಲ್ಲೇ ಚರ್ಚಿಸಿ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಅಧ್ಯಕ್ಷರು, ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಕೆಲಸ ಮಾಡುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಬೇಲೂರು ದೇಗುಲ ವಿಶ್ವ ಪಾರಂಪರಿಕ ಪಟ್ಟಿಗೆ ಸೇರುತ್ತಿರುವ ಕಾರಣ ಪಟ್ಟಣ ಪ್ರವೇಶಿಸುವ ರಸ್ತೆ ಪಕ್ಕದಲ್ಲಿರುವ ಮಾಂಸದಂಗಡಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದು, ಶೀಘ್ರವಾಗಿ ಸ್ಥಳಾಂತರಕ್ಕೆ ಮುಂದಾಗಬೇಕೆಂದು ಜಿ.ಶಾಂತಕುಮಾರ್ ಮತ್ತು ನಾಮನಿರ್ದೇಶಿತ ಸದಸ್ಯ ಮಂಜುನಾಥ್ ಒತ್ತಾಯಿಸಿದರು.
ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ನಮ್ಮ ವಾರ್ಡಿನಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬ ಬದಲಾಯಿಸಿ ಎಂದು ಹೇಳಿ ವರ್ಷವಾಯಿತು. ಆದರೂ ಕ್ರಮಕ್ಕೆ ಮುಂದಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಭೂಮಿ ವಿಸ್ತಾರಕ್ಕೆ ಅಧಿಕಾರಿಗಳು ಮುಂದಾಗಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ರತ್ನ ಸತ್ಯನಾರಾಯಣ ಮಾತನಾಡಿ, ಪೌರಕಾರ್ಮಿಕರಿಗೆ ಬೆಳಗ್ಗೆ ನೀಡುವ ಉಪಹಾರ ಗುಣಮಟ್ಟದಿಂದ ಕೂಡಿಲ್ಲ. ಜತೆಗೆ ಸಮಪರ್ಕವಾಗಿ ವೇತನ ನೀಡುತ್ತಿಲ್ಲ. ಸ್ವಚ್ಛತೆಯಂತೂ ಇಲ್ಲದಂತ್ತಾಗಿದೆ. ಬೀದಿ ದೀಪ ನಿರ್ವಹಣೆ ಮಾಡುವ ಗುತ್ತಿಗೆದಾರನಿಗೆ ಫೋನ್ ಮಾಡಿದರೆ ಉಡಾಫೆಯಿಂದ ವರ್ತಿಸುತ್ತಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಜಮಾಲ್ಲುದ್ದೀನ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ 14 ಕೋಟಿ ರೂ. ಕಾಮಗಾರಿ ಬಗ್ಗೆ ಪುರಸಭೆ ಅಧಿಕಾರಿ, ಅಧ್ಯಕ್ಷರು ಅಥವಾ ಸದಸ್ಯರಿಗಾಗಲಿ ತಿಳಿದಿಲ್ಲ. ಅಲ್ಲಿ ಬೇಕಾಬಿಟ್ಟಿ ಕೆಲಸ ನಡೆಯುತ್ತಿದೆ. ಕಳೆದ 10 ವರ್ಷದಿಂದ ಪಟ್ಟಣದ ಜನತೆಗೆ ಪುರಸಭೆಯಿಂದ ಒಂದೂ ನಿವೇಶನ ನೀಡಿಲ್ಲದ ಕಾರಣ ನಿವೇಶನ ಕೊಡುವುದಕ್ಕೆ ಮುಂದಾಗಬೇಕು ಎಂದರು.
ಸದಸ್ಯರ ಗಮನಕ್ಕೆ ಬಾರದೆ ಪುರಸಭೆ ಅನುದಾನದಲ್ಲಿ ಚರಂಡಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಾಕಲು ಕ್ರಿಯಾಯೋಜನೆ ತಯಾರಿಸಿರುವುದು ಎಷ್ಟು ಸರಿ. ಇದನ್ನು ಮೊದಲು ಸರಿಪಡಿಸಿ ಎಂದು ಫಯಾಜ್ ಅಹಮದ್ ಸಭೆ ಗಮನಕ್ಕೆ ತಂದರು. ಉಪಾಧ್ಯಕ್ಷೆ ಉಷಾ, ಮುಖ್ಯಾಧಿಕಾರಿ ಸುಜಯ್‌ಕುಮಾರ್ ಇದ್ದರು.
ಪಟ್ಟಣದ ಹೊಸ ನಗರ ಬಡಾವಣೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಸಾಕಷ್ಟು ಜನರು ಕಿರಿಕಿರಿ ಅನುಭವಿಸುವಂತ್ತಾಗಿದೆ. ಅಬಕಾರಿ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಅಧ್ಯಕ್ಷರು ಗಮನಹರಿಸಿ ನಿಯಂತ್ರಣಕ್ಕೆ ಮುಂದಾಗಬೇಕು.
ಮೀನಾಕ್ಷಿ ವೆಂಕಟೇಶ್, ಪುರಸಭೆ ಸದಸ್ಯೆ
ಪುರಸಭೆಗೆ ಸೇರಿದ ಲೆಡ್ಜರ್ ಪುಸ್ತಕ ಕಚೇರಿಯಲ್ಲಿ ಇಲ್ಲ. ಈ ಬಗ್ಗೆ ಕೇಳಿದರೆ ನ್ಯಾಯಾಲಯದಲ್ಲಿದೆ ಎನ್ನುತ್ತಾರೆ. ಆದರೆ, ಅದು ಎಲ್ಲಿದೆ ಎಂದು ಯಾರೂ ಸ್ಪಷ್ಟವಾಗಿ ಹೇಳುತ್ತಿಲ್ಲ ಮತ್ತು ಆ ಪುಸ್ತಕ ಎಲ್ಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಅದನ್ನು ಪುರಸಭೆ ಕಚೇರಿಗೆ ತರುವ ಕೆಲಸವಾಗಬೇಕಿದೆ.
ಬಿ.ಗಿರೀಶ್, ಪುರಸಭೆ ಸದಸ್ಯ
ಬಯಲು ಮುಕ್ತ ಶೌಚಕ್ಕೆ ಸರ್ಕಾರ ಒತ್ತು ಕೊಟ್ಟರೆ, ಬೇಲೂರು ಪುರಸಭೆಗೆ ಶೌಚಗೃಹ ನಿರ್ಮಾಣಕ್ಕೆ ಇನ್ನೂ ಅರ್ಜಿ ಬರುತ್ತಿದೆ ಎಂದರೆ ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ ಎಂಬುದು ತಿಳಿಯುತ್ತದೆ.
ಮಂಜುನಾಥ್ ನಾಮಿನಿ ಸದಸ್ಯ