ತಿ.ನರಸೀಪುರ: ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ, ಇಲ್ಲವೇ ಆಗಲ್ಲವೆಂದು ಹೇಳಿಬಿಡಿ ಎಂದು ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನರಸೀಪುರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನ.13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ನೆರವೇರಿಸುವ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜನರ ಕೆಲಸ ಮಾಡಲು ಇಚ್ಛಾಶಕ್ತಿ ಇಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಕಿಡಿಕಾರಿದರು.
ಪುರಸಭೆ ಸೇರಿದಂತೆ ಅಬಕಾರಿ ಇಲಾಖೆ, ನೀರಾವರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಕೃಷಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಂಸದರು, ತಾಲೂಕಿನಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪುರಸಭೆಯಲ್ಲಿ ಸಾಮಾನ್ಯ ಜನರ ಕೆಲಸ ಆಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಬೀದಿ ದೀಪಗಳ ವ್ಯವಸ್ಥೆ ಸರಿಯಿಲ್ಲ. ಅಲ್ಲದೆ ಬಂಗಾರಪ್ಪ ಬಡಾವಣೆ ಖಾತೆ ಮಾಡಲು 50 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ ಎಂಬಿತ್ಯಾದಿ ದೂರುಗಳು ಬಂದಿವೆ. ಇನ್ನು ಪತ್ರಿಕೆಗಳಲ್ಲೂ ಪುರಸಭೆ ಲೋಪಗಳ ವಿಚಾರ ಪ್ರಕಟವಾಗುತ್ತಿವೆ. ನೀವು ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಎಂದು ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ ಅವರನ್ನು ತರಾಟೆಗೆ ತೆಗೆದುಕಂಡರು.
ಸಣ್ಣ ವಿಚಾರಕ್ಕೂ ನನ್ನ ಬಳಿ ಜನರು ಬರುತ್ತಿದ್ದಾರೆ. ಹಾಗಾದರೆ ಅಧಿಕಾರಿಗಳ ಕೆಲಸವೇನು? ಸಾಮಾನ್ಯ ಜನರು ಅವರ ಕೆಲಸ ಕಾರ್ಯಗಳನ್ನು ಬಿಟ್ಟು ನನ್ನ ಬಳಿ ಬರುವುದು ತಪ್ಪಬೇಕು. ಅಧಿಕಾರಿಗಳು ತಮ್ಮ ಹಂತದಲ್ಲೇ ಕೆಲಸ ಮಾಡಿಕೂಡಬೇಕು. ಆ ಮೂಲಕ ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಕ್ರಮವಹಿಸುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆಯಿಂದ ಸವಲತ್ತು ವಿತರಿಸುವಾಗ ನಿಯಮ ಪಾಲನೆ ಮಾಡುತ್ತಿಲ್ಲ. ಹಣ ಪಡೆದು ಪವರ್ ಟಿಲ್ಲರ್ ನೀಡಲಾಗುತ್ತಿದೆ ಎಂಬ ದೂರು ಬಂದಿದ್ದು, ಇದು ಸರಿಯಾಗಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಹಾಸಿನಿ ಅವರಿಗೆ ಸೂಚಿಸಿದರು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ತಾಪಂ ಇಒ ಅನಂತರಾಜು, ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್, ಬಿಇಒ ಶಿವಮೂರ್ತಿ, ಬಿಸಿಎಂ ವಿಸ್ತರಣಾಧಿಕಾರಿ ರಾಜಣ್ಣ, ಪಿಆರ್‌ಡಿ ಎಇಇ ಪಿ.ಎಸ್.ಚರಿತಾ, ಸೆಸ್ಕ್ ಎಇಇ ವೀರೇಶ್, ಸಿಡಿಪಿಒ ಗೋವಿಂದರಾಜು, ಲೋಕೋಪಯೋಗಿ ಇಲಾಖೆ ಎಇಇ ಸತೀಶ್‌ಚಂದ್ರ, ನೀರಾವರಿ ಇಲಾಖೆ ಎಇಇಗಳಾದ ಎಚ್.ಸಿ.ರತೀಶ್, ಶಾಂತರಾಜು, ಎಸ್.ಮಂಜುನಾಥ್, ಕಿರಿಯ ಇಂಜಿನಿಯರ್ ರವೀಂದ್ರ ಇತರರಿದ್ದರು.