ಜಿಲ್ಲೆ

ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ

ಲಿಂಗಸುಗೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಇತರೆಡೆ ಪ್ರಮುಖ ರಸ್ತೆ ಬದಿ ಇರುವ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ದಲಿತ ಸಂರಕ್ಷ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕ ಆಸ್ಪತ್ರೆ ಮತ್ತು ಹಳೆಯ ಬಸ್ ನಿಲ್ದಾಣ ಆವರಣದಲ್ಲಿ ಅನಧಿಕೃತವಾಗಿ ಅಂಗಡಿ ಮತ್ತು ತಳ್ಳು ಬಂಡಿಗಳನ್ನಿಟ್ಟು ವ್ಯಾಪಾರ ಮಾಡಲಾಗುತ್ತಿದೆ. ಕೆಲವರು ಅಂಗಡಿಗಳನ್ನು ಬಾಡಿಗೆ ನೀಡಿ ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಪುರಸಭೆ ಅನುಮತಿ ಪಡೆಯದೆ ಮತ್ತು ಯಾವುದೇ ಶುಲ್ಕ ಪಾವತಿಸದೆ ವ್ಯವಹಾರ ನಡೆಸಲಾಗುತ್ತಿದೆ. ಬೀದಿಬದಿ ವ್ಯಾಪಾರದಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಆಸ್ಪತ್ರೆ ಮುಂಭಾಗದಲ್ಲಿ ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ಆಂಬುಲೆನ್ಸ್ ಮತ್ತು ಗಂಭೀರ ಸ್ಥಿತಿಯ ರೋಗಿಗಳು ಆಸ್ಪತ್ರೆ ಒಳ ಹೋಗಲು ತೊಂದರೆಯಾಗಿದೆ ಎಂದು ದೂರಲಾಯಿತು.

ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಬಡ ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಂಗಡಿ ಮತ್ತು ತಳ್ಳು ಬಂಡಿ ಹಾಕಲು ಪರವಾನಗಿ ನೀಡಬೇಕು. ಮಧ್ಯವರ್ತಿಗಳ ಹಾವಳಿ ತಡೆದು ಬೀದಿ ಬದಿ ವ್ಯಾಪಾರಸ್ಥರಿಗೆ ಬಾಡಿಗೆ ನಿಗದಿಪಡಿಸಬೇಕು. ಇದರಿಂದ ಪುರಸಭೆಗೂ ಆದಾಯ ಬರಲಿದೆ ಎಂದು ತಿಳಿಸಲಾಯಿತು.