ಜಿಲ್ಲೆ

ಮಧ್ಯವರ್ತಿಗಳ ಹಾವಳಿ ತಪ್ಪಿಸಿ

ಬೇಲೂರು: ರಾಗಿ ಮತ್ತು ಭತ್ತ ಖರೀದಿ ಕೇಂದ್ರದಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ಹಾಗೂ ಮಧ್ಯವರ್ತಿಗಳ ಹಾವಳಿಗೆ ಅವಕಾಶವಾಗದಂತೆ ಅಧಿಕಾರಿಗಳು ಖರೀದಿ ಮಾಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.


ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗುರುವಾರ ರಾಗಿ ಮತ್ತು ಭತ್ತ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ಬೆಲೆ ಸಿಗದಿದ್ದಾಗ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಬೆಳೆ ಖರೀದಿಸುತ್ತದೆ. ಕಳೆದ ಬಾರಿ ಮಧ್ಯವರ್ತಿಗಳಿಂದ ಖರೀದಿಸಿರುವ ಮತ್ತು ಹಣಕ್ಕಾಗಿ ರೈತರನ್ನು ಪೀಡಿಸಿರುವ ಘಟನೆಗಳು ಸಂಭವಿಸಿವೆ. ಈ ಬಾರಿ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು. ವಿದ್ಯುತ್ ಇಲ್ಲ, ಸರ್ವರ್ ಇಲ್ಲ ಎಂಬ ಕಾರಣ ಹೇಳದೆ, ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ರೈತರನ್ನು ಯಾವುದೇ ಕಾರಣಕ್ಕೂ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.


ಖರೀದಿ ಕೇಂದ್ರದ ಅಧಿಕಾರಿ ಸಾನ್ವಿ ಮಾತನಾಡಿ, ರಾಗಿಯನ್ನು 3578 ರೂ. ಬೆಂಬಲ ಬೆಲೆಗೆ ಖರೀದಿಸಲಾಗುತ್ತಿದ್ದು, ಈಗಾಗಲೇ 32302 ಕ್ವಿಂಟಾಲ್ ರಾಗಿ ನೀಡಲು 2252 ರೈತರು ನೋಂದಣಿ ಮಾಡಿಸಿದ್ದಾರೆ. ಸಾಮಾನ್ಯ ಭತ್ತಕ್ಕೆ 2040 ರೂ. ಮತ್ತು ಗ್ರೇಡ್ ಎ ಭತ್ತಕ್ಕೆ 2060 ರೂ. ಬೆಂಬಲ ಬೆಲೆ ನಿಗದಿ ಪಡಿಸಲಾಗಿದ್ದು, 2580 ಕ್ವಿಂಟಾಲ್ ಭತ್ತ ನೀಡಲು 94 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಗಿಯನ್ನು ಗರಿಷ್ಠ 20 ಕ್ವಿಂಟಾಲ್ ಹಾಗೂ ಭತ್ತವನ್ನು 40 ಕ್ವಿಂಟಾಲ್‌ವರೆಗೆ ಮಾರಾಟ ಮಾಡಲು ಅವಕಾಶವಿರುತ್ತದೆ. ನೋಂದಣಿಗೆ ಮಾರ್ಚ್ 31 ರವರೆಗೆ ಅವಕಾಶವಿರುತ್ತದೆ. ಜನವರಿ 31 ರಿಂದ ಖರೀದಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.


ತಹಸೀಲ್ದಾರ್ ರಮೇಶ್, ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜು, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಆಹಾರ ಶಿರಸ್ತೇದಾರ್ ಮಂಜುನಾಥ್, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಕಟ್ಟಿಮನಿ ಇದ್ದರು.