ಜಿಲ್ಲೆ

ಮಧ್ಯಪ್ರದೇಶದಿಂದ ಗನ್​ ತಂದು ಕೊಲೆಗೆ ಸಂಚು ವಿಫಲ

ಕಲಬುರಗಿ: ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಸೇಡು ತೀರಿಸಿಕೊಳ್ಳಲು ಸಂಚು ಹೂಡಿ ಸುಪಾರಿ ನೀಡಿದ್ದ ಪ್ರಕರಣ ಭೇದಿಸಿರುವ ನಗರ ಪೊಲೀಸರ ತಂಡ, ಐವರನ್ನು ಬಂಧಿಸಿ ಮೂರು ನಾಡಪಿಸ್ತೂಲ್ ಮತ್ತು ೧೧ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿದರು.
ಸಬ್ ಅರ್ಬನ್ ಹಾಗೂ ಚೌಕ್ ಠಾಣೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಸಂಚಿನಲ್ಲಿ ಭಾಗಿಯಾಗಿರುವ ವಿಜಯಪುರದ ಗೈಬುಸಾಬ್ ಸಾರವಾಡ, ಬೆಟ್ಟಜೇವರ್ಗಿಯ ಯಶವಂತ ಮೇಲ್ಕೇರಿ, ಮುರಡಿಯ ಗೌತಮ ನಾಮನೂರ, ಮಡಕಿ ಗ್ರಾಮದ ಶಿವಕುಮಾರ ವಾಗ್ದರಗಿ ಹಾಗೂ ಕೊಲೆಗೆ ಸುಪಾರಿ ನೀಡಿದ್ದ ಬೋಧನ ಗ್ರಾಮದ ಹಣಮಂತರಾಯ ಪಗಡೆ ಎಂಬುವರನ್ನು ಬಂಧಿಸಲಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿAದ ಗನ್, ಗುಂಡುಗಳ ಜತೆಗೆ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಟಾಟಾ ಇಂಡಿಕಾ, ಎರ್ಟಿಗಾ ಕಾರುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಪಿಐ ಸಂತೋಷ ತಟ್ಟೆಪಲ್ಲಿ, ಎಸ್‌ಐ ಶಿವಶರಣಪ್ಪ, ಶಿವಾನಂದ ಗುರುಮೂರ್ತಿ, ರಾಜಕುಮಾರ, ತೌಸೀಫ್, ಮೋಸಿನ್, ನಾಗೇಂದ್ರ, ಮಾಳಪ್ಪ, ಮಂಜುನಾಥ ಕಾಡಾ, ಚನ್ನವೀರೇಶ, ಸುಮಿತ್, ಬಂದೇನವಾಜ್ ಅವರನ್ನು ಒಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದ್ದನ್ನು ಡಾ.ಶರಣಪ್ಪ ಶ್ಲಾಘಿಸಿದರು.
ಸಾರ್ವಜನಿಕರ ಬಲೆಗೆ ಬಿದ್ದ: ಶರಣಬಸಪ್ಪ ಹಂದೆ ಕೊಲೆಗೆ ಸಂಚು ರೂಪಿಸುತ್ತಿದ್ದ ಗೈಬುಸಾಬ್ ಸೆ.೧೫ರಂದು ಸಿದ್ಧರಾಮೇಶ್ವರ ಕಾಲನಿಯಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ವಿಚಾರಣೆ ನಡೆಸಿದ್ದಾಗ ಕೊಲೆ, ನಾಡ ಪಿಸ್ತೂಲ್ ವಿಷಯ ತಿಳಿದಿದೆ. ನಂತರ ವಿಶೇಷ ತಂಡ ರಚಿಸಿದಾಗ ಇಡೀ ವಿಷಯ ಹೊರ ಬಿದ್ದಿದೆ.
ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಉಪ ಪೊಲೀಸ್ ಆಯುಕ್ತ ಪ್ರವೀಣ ನಾಯಕ, ಎಸಿಪಿ ಚಂದ್ರಶೇಖರ ಇದ್ದರು.

ಮಧ್ಯಪ್ರದೇಶದಿಂದ ಗನ್: ಪ್ರಮುಖ ಆರೋಪಿ ಗೈಬುಸಾಬ್ ಹಿಂದೆಯೂ ಶಸ್ತಾçಸ್ತç ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಇನ್ನೊಬ್ಬ ಯಶವಂತ ವಿರುದ್ಧ ಒಂಬತ್ತು ಪ್ರಕರಣಗಳಿವೆ. ಶರಣಪ್ಪ ಕಂದೆ ಕೊಲೆಗೆ ಸಂಚು ರೂಪಿಸಿದ್ದ ಇವರು ಮಧ್ಯಪ್ರದೇಶದ ಗೊಂಡ್ವಾನ್ ಜಿಲ್ಲೆ ಸಿಂದ್ರಾ ಪ್ರದೇಶದ ಸ್ಥಳೀಯರಿಂದ ಗನ್ ಖರೀದಿಸಿ ತಂದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದರು.