ಶಿರಸಿ: ಲಾಕ್ಡೌನ್ ಕಾರಣದಿಂದ ಮಧ್ಯಪ್ರದೇಶದ ನವೋದಯ ಶಾಲೆಯಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ 19 ವಿದ್ಯಾರ್ಥಿಗಳಿಗೆ ಮನೆ ಸೇರುವ ಭಾಗ್ಯ ಲಭಿಸಿದ್ದು, ಶನಿವಾರ ಬೆಳಗ್ಗೆ ಮುಂಡಗೋಡಿನ ನವೋದಯ ಶಾಲೆಗೆ ಸುರಕ್ಷಿತವಾಗಿ ಮರಳಿದ್ದಾರೆ.
ಇಲ್ಲಿನ ನವೋದಯ ಶಾಲೆಯಿಂದ ಪ್ರತಿ ವರ್ಷದಂತೆ ಮಧ್ಯಪ್ರದೇಶದ ನವೋದಯ ಶಾಲೆಗೆ ಓದಲು ತೆರಳಿದ್ದ 19 ವಿದ್ಯಾರ್ಥಿಗಳು ಕರೊನಾ ಲಾಕ್ಡೌನ್ ಕಾರಣ ಅಲ್ಲಿಯೇ ಸಿಲುಕಿದ್ದರು. ಊರಿಗೆ ಮರಳಲಾಗದ ಸ್ಥಿತಿಯಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮುತವರ್ಜಿಯಿಂದ ಬಸ್ ಮೂಲಕ ಮರಳಿ ಜಿಲ್ಲೆಯ ನವೋದಯ ಶಾಲೆ ತಲುಪಿದ್ದಾರೆ.
ಸಿದ್ದಾಪುರ ಮೂಲದ ವಿದ್ಯಾರ್ಥಿನಿಯ ತಾಯಿ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರಗೆ ದೂರವಾಣಿ ಕರೆ ಮಾಡಿ ನಮ್ಮ ಮಗಳನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಹಾಗೂ ಮಧ್ಯಪ್ರದೇಶ ರಾಜ್ಯ ಸರ್ಕಾರದ ಮುಖ್ಯಸ್ಥರನ್ನು ಸಂರ್ಪಸಿ, ಅವರ ಸಹಕಾರದೊಂದಿಗೆ ವಿಶೇಷ ಬಸ್ನಲ್ಲಿ ಶಾಲೆಯ ಮಕ್ಕಳನ್ನು ಶನಿವಾರ ಕರೆತರಲಾಗಿದೆ.
ಹೆಬ್ಬಾರ ಭೇಟಿ: ಶಾಲೆಗೆ ಮಕ್ಕಳು ಆಗಮಿಸಿರುವ ಹಿನ್ನೆಲೆಯಲ್ಲಿ ಸಚಿವ ಹೆಬ್ಬಾರ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ತಾಯಂದಿರ ಕಷ್ಟವನ್ನು ಅರಿತು ಮಕ್ಕಳನ್ನು ಕರೆತರಲು ಕಾಳಜಿ ವಹಿಸಲಾಗಿದೆ. ಅವರ ಆರೋಗ್ಯವನ್ನು ಮತ್ತೊಮ್ಮೆ ತಪಾಸಣೆ ನಡೆಸಿ, ಎರಡು ದಿನಗಳ ಬಳಿಕ ಮನೆಗಳಿಗೆ ಕಳುಹಿಸಿ ಕೊಡಲಾಗುವುದು ಎಂದರು.
ಮೂರು ಬಾರಿ ರೈಲು ಟಿಕೆಟ್ ರದ್ದು: ಮಧ್ಯಪ್ರದೇಶದಿಂದ ಮರಳಿ ಊರಿಗೆ ಬರಲು ಮೂರು ಬಾರಿ ರೈಲು ಟಿಕೆಟ್ ಕಾಯ್ದಿರಿಸಿದರೂ ಲಾಕ್ಡೌನ್ನಿಂದ ಅದು ರದ್ದಾಯಿತು. ಇದರಿಂದ ಅಲ್ಲೇ ಉಳಿದಿದ್ದ ಮಕ್ಕಳಿಗೆ ಊಟ, ವಸತಿಯ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮನೆಯಲ್ಲಿ ಮಕ್ಕಳ ಬಗ್ಗೆ ಚಿಂತೆ ಹೆಚ್ಚಾದ ಪರಿಣಾಮ ಮುತವರ್ಜಿ ವಹಿಸಿ ಅವರನ್ನು ಕರೆದುಕೊಂಡು ಬರಲಾಗಿದೆ. ನವೋದಯ ಶಾಲೆಯ ಶಿಕ್ಷಕರ ಜತೆಗೆ ಅವರನ್ನು ಕರೆಸಲಾಗಿದೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದರು.