ಮಧುಗಿರಿ: ಕರೊನಾ ಹತೋಟಿಗೆ ತರುವಲ್ಲಿ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಹಾಗೂ ಪೊಲೀಸರು ಶ್ರಮಿಸಿದ ಪರಿಣಾಮ ಪಾಸಿಟಿವ್ ಪ್ರಮಾಣ ಶೇ.9ಕ್ಕೆ ತಗ್ಗಿದೆ.
ಸೋಂಕು ವ್ಯಾಪಿಸುತ್ತಿದ್ದ ದಿನಗಳಲ್ಲಿ ಪಾಸಿಟಿವ್ ಪ್ರಮಾಣ ಶೇ.40 ಇತ್ತು. ನಂತರದ ದಿನಗಳಲ್ಲಿ ತಾಲೂಕು ಅಧಿಕಾರಿಗಳು ಕೈಗೊಂಡ ಕ್ರಮಗಳಿಂದಾಗಿ ಸೋಂಕು ಇಳಿಮುಖವಾಗುತ್ತಿದೆ.
ಸೋಂಕು ಹೆಚ್ಚಿರುವ ಹಳ್ಳಿಗಳಲ್ಲಿ ರೆಡ್‌ಜೋನ್, ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ವಿಶೇಷ ನಿಗಾ ವಹಿಸಲಾಯಿತು. ಗ್ರಾಮ ಪಡೆಗಳನ್ನು ರಚಿಸಿ, ಗ್ರಾಪಂ ಅಧ್ಯಕ್ಷರು, ಪಿಡಿಒಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಿಂದ ಪ್ರತಿ ಮನೆ ಸಂಪರ್ಕಿಸಿ ಅವರ ಆರೋಗ್ಯ ವಿಚಾರಿಸಲಾಯಿತು. ಸೋಂಕಿತರಿಗೆ ಹೋಂ ಐಸೋಲೇಷನ್, ಮನೆಯಲ್ಲಿ ಸೌಕರ್ಯ ಇಲ್ಲದವರಿಗೆ ಕಡ್ಡಾಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಇದು ಸೋಂಕು ತಡೆಗೆ ಸಹಕಾರಿಯಾಯಿತು.
ಉತ್ತಮ ಚಿಕಿತ್ಸೆಯಿಂದ ಹಲವರು ಗುಣಮುಖ: ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನ ಸಮೀಪದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ 100 ಹಾಸಿಗೆ ಸಾಮರ್ಥ್ಯವಿರುವ ಕೇರ್ ಸೆಂಟರ್ ಆರಂಭಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಏ.27ರಂದು ಆರಂಭವಾದ ಕೋವಿಡ್ ಕೇಂದ್ರದಲ್ಲಿ ಇಲ್ಲಿಯವರೆಗೂ 406 ಜನ ಚಿಕಿತ್ಸೆ ಪಡೆದಿದ್ದಾರೆ. ಈಗ 80 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಡ್ಡೇರಿ ಹೋಬಳಿ ಬಡವನಹಳ್ಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿಯೂ 80 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ನಿತ್ಯ 600 ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಮೇ 31ರ ಅಂತ್ಯಕ್ಕೆ 23961 ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಒಟ್ಟು 5603 ಸೋಂಕಿತರನ್ನು ಪತ್ತೆ ಹಚ್ಚಲಾಗಿದ್ದು, 4587 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 965 ಪ್ರಕರಣಗಳು ಸಕ್ರಿಯವಾಗಿವೆ.
ಡಾ.ರಮೇಶ್‌ಬಾಬು, ಟಿಎಚ್‌ಒ ಮಧುಗಿರಿ
ಸೋಂಕಿನ ಪ್ರಮಾಣವನ್ನು ಶೇ.9ಕ್ಕೆ ಇಳಿಸಲಾಗಿದೆ. ತಾಲೂಕಿನ ಜನತೆ ಸಹಕರಿಸಿದಲ್ಲಿ ಶೇ.5ಕ್ಕೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ವದಂತಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ.
ವೈ.ರವಿ, ತಹಸೀಲ್ದಾರ್, ಮಧುಗಿರಿ.