ಜಿಲ್ಲೆ

ಮದ್ಯವ್ಯಸನಿಗಳ ಆಟಾಟೋಪ

ಕುಮಟಾ: ಜನತಾ ಕರ್ಫ್ಯೂ ಜಾರಿಯಾದ ಬಳಿಕ ಪಟ್ಟಣ ಸೇರಿ ವಿವಿಧೆಡೆ ವ್ಯಸನಿಗಳು ಮದ್ಯ ಸೇವಿಸಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಹಾಳು ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿವೆ.

ಮಾರಾಟದ ಸ್ಥಳದಲ್ಲಿ ಕುಡಿಯಲು ಅವಕಾಶ ಇಲ್ಲ. ಹೀಗಾಗಿ ಮದ್ಯಪ್ರಿಯರು ಬಯಲು ಪ್ರದೇಶದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದಾರೆ. ಆದರೆ, ಮದ್ಯ ಸೇವನೆ ಬಳಿಕ ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಒಡೆದು ವಿಕೃತಿ ಪ್ರದರ್ಶಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಗಾಜಿನ ಬಾಟಲಿಗಳ ಒಡೆದ ಚೂರುಗಳು ಅಪಾಯಕಾರಿಯಾಗಿ ಪರಿಸರಕ್ಕೆ ಸಮಸ್ಯೆಯಾಗುತ್ತಿವೆ. ಪಟ್ಟಣ ವ್ಯಾಪ್ತಿಯಲ್ಲಿ ಹಳಕಾರ ಬೆಟ್ಟದ ರಸ್ತೆ, ರೈಲು ನಿಲ್ದಾಣದ ಆಸುಪಾಸು, ಮಣಕಿ ಮೈದಾನದ ಹಿಂದೆ, ವನ್ನಳ್ಳಿ ಸಮುದ್ರ ತೀರ, ಹೆಡ್ ಬಂದರ, ಚಿತ್ರಿಗಿ ಬೆಟ್ಟ ಮುಂತಾದೆಡೆ ಸಾವಿರಾರು ಮದ್ಯದ ಬಾಟಲಿಗಳನ್ನು ಎಸೆದಿರುವುದು ಕಂಡು ಬಂದಿದೆ.

ಮೂರೂರು ಗುಡ್ಡ, ಕಾಗಾಲ್ ಮಾನೀರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆ ಗುಂಪುಗುಂಪಾಗಿ ಕುಳಿತು ಮದ್ಯಸೇವನೆ ಮಾಡುವುದನ್ನು ಮುಖ್ಯ ರಸ್ತೆಯಿಂದಲೇ ಕಾಣಬಹುದಾಗಿದೆ. ಕುಡಿದ ಬಳಿಕ ಬಾಟಲಿಗಳನ್ನು ಒಡೆದು ಚೆಲ್ಲಾಡುತ್ತಿದ್ದಾರೆ. ನಿತ್ಯ ಇಲ್ಲಿ ಮೇವಿಗೆ ಬರುವ ಜಾನುವಾರುಗಳು, ಪ್ರಾಣಿಗಳಿಗೆ ಗಾಜು ಚುಚ್ಚಿ ಗಾಯಗೊಂಡ ಉದಾಹರಣೆಗಳು ಸಾಕಷ್ಟಿವೆ. ಗ್ರಾಮೀಣ ಪ್ರದೇಶದಲ್ಲೂ ಮನೆಯ ಆಸುಪಾಸಿನ ತೋಟ, ರಸ್ತೆ, ಹಳ್ಳ, ಬೆಟ್ಟ, ಗುಡ್ಡಗಳಲ್ಲಿ ಕುಡಿದು ಬಾಟಲಿ ಎಸೆಯುವುದು ಹೆಚ್ಚಾಗಿದೆ.

ನಿರುಪಯುಕ್ತ ಪ್ಲಾಸ್ಟಿಕ್, ಗಾಜಿನ ಬಾಟಲಿ ಸಂಗ್ರಹಿಸಿ ಗುಜರಿಗೆ ಮಾರಿ ಜೀವನ ನಡೆಸುತ್ತಿದ್ದ ಗಣಪತಿ ಎಂಬುವರು ‘ವಿಜಯವಾಣಿ’ಯೊಂದಿಗೆ ಮಾತನಾಡಿ, ‘ಪ್ಲಾಸ್ಟಿಕ್ ಬಾಟಲಿಗಳಿಗೆ ಗುಜರಿಯಲ್ಲಿ ಈಗಲೂ ಬೇಡಿಕೆ ಇದೆ. ಆದರೆ, ಬಿಯರ್, ವಿಸ್ಕಿ ಇತರ ಬಾಟಲಿಗಳು ಈಗೀಗ ಬಣ್ಣದ ಗಾಜಿನಲ್ಲಿರುವುದರಿಂದ ಅದಕ್ಕೆ ಬೆಲೆ ತೀರಾ ಕಡಿಮೆ. ಪಾರದರ್ಶಕ ಗಾಜಿನ ಬಾಟಲಿಗಳಿಗೆ ಮಾತ್ರ ಸ್ವಲ್ಪ ಹೆಚ್ಚು ಬೆಲೆ ಇದೆ. ಎಲ್ಲ ಗುಜರಿಯವರೂ ಅದನ್ನು ಖರೀದಿಸುವುದಿಲ್ಲ. ಹೀಗಾಗಿ ಗಾಜಿನ ಬಾಟಲಿಗಳನ್ನು ಹೆಕ್ಕುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯಗಳಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಿರುವ ಗಾಜಿನ ತ್ಯಾಜ್ಯಗಳು ಸಹಜವಾಗಿ ಪರಿಸರ ಕೆಡಿಸುತ್ತಿರುವುದು ಗಂಭೀರವಾದ ವಿಷಯ. ಗಾಜು ಒಡೆದು ಬಿಸಾಡುವ ಪ್ರವೃತ್ತಿ ಬಗ್ಗೆ ವ್ಯವಸ್ಥೆ ಕಟ್ಟುನಿಟ್ಟಾಗಬೇಕಿದೆ.

ಗಾಜಿನ ಬಾಟಲಿಗಳನ್ನು ಪುರಸಭೆಯ ಕಸದ ವಾಹನಗಳಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದೇವೆ. ಆದರೆ, ಇತ್ತೀಚೆಗೆ ನೆರಳು ಹಾಗೂ ನಿರ್ಜನ ಪ್ರದೇಶಗಳಲ್ಲಿ, ಸಮುದ್ರ ತೀರದಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿದು ಬಾಟಲಿ ಒಡೆದು ಬಿಸಾಡುವುದು ಹೆಚ್ಚಾಗಿದೆ. ಈ ವಿಷಯದಲ್ಲಿ ಸಾರ್ವಜನಿಕರು ಸ್ವಯಂಪ್ರಜ್ಞೆಯಿಂದ ಪರಿಸರಕ್ಕೆ ಪೂರಕವಾಗಿ ವರ್ತಿಸಬೇಕು. ವನ್ನಳ್ಳಿ ಸಮುದ್ರ ತೀರದಲ್ಲಿ ಕಸದ ತೊಟ್ಟಿಗಳು ಬಾಟಲಿಗಳಿಂದ ತುಂಬಿರುವುದು ಗಮನಕ್ಕೆ ಬಂದಿದೆ. ಆ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.| ಹೇಮಚಂದ್ರ ಎಚ್. ವಿ.ಪುರಸಭೆ ಪರಿಸರ ಇಂಜಿನಿಯರ್