ತರೀಕೆರೆಯಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ತಾಪಂ ಇಒ ಎಸ್.ಗೀತಾ ಮಾತನಾಡಿದರು. ಟಿ.ದಾದಾಪೀರ್, ಟಿ.ಎಂ.ಭೋಜರಾಜ್, ಪ್ರಕಾಶ್‌ರಾವ್, ಕೆ.ವೀರೇಂದ್ರ, ಕುಸುಮಾಧರ್ ಇತರರಿದ್ದರು. 
ಜಿಲ್ಲೆ

ಮದ್ಯವರ್ಜನ ಶಿಬಿರ ವ್ಯಕ್ತಿತ್ವ ಬದಲಿಸಲು ಸಹಕಾರಿ

ತರೀಕೆರೆ: ಮದ್ಯವ್ಯಸನ ಆರೋಗ್ಯ ಹದಗೆಡಿಸುವುದಲ್ಲದೆ ಜೀವನ ಮತ್ತು ನೆಮ್ಮದಿ ಭಂಗಕ್ಕೆ ಕಾರಣವಾಗಲಿದೆ ಎಂದು ತಾಪಂ ಇಒ ಎಸ್.ಗೀತಾ ಹೇಳಿದರು.

ಶನಿವಾರ ಪಟ್ಟಣದ ಅಕ್ಕನಾಗಲಾಂಬಿಕೆ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾರ್ವಜನಿಕ ಆಸ್ಪತ್ರೆ, ಕರ್ನಾಟಕ ಜನಜಾಗೃತಿ ವೇದಿಕೆ, ಪುರಸಭೆ, ಪೊಲೀಸ್ ಇಲಾಖೆ, ರೋಟರಿ ಕ್ಲಬ್ ಹಾಗೂ ಜನಹಿತ ಸೇವಾ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಮಾದಕ ವ್ಯಸನದಿಂದ ದೂರವಿದ್ದು ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಪಾಲಕರು ಮಕ್ಕಳ ಸಮಸ್ಯೆ ಆಲಿಸಿ ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಮದ್ಯವರ್ಜನ ಶಿಬಿರಗಳು ವ್ಯಕ್ತಿತ್ವ ಬದಲಿಸಲು ಸಹಕಾರಿ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ, ಮದ್ಯಪಾನದಿಂದ ದೇಹದಲ್ಲಿ ವಿಷಕಾರಕ ಅಂಶಗಳು ಸೇರ್ಪಡೆಯಾಗಿ ಜೀವಕ್ಕೆ ಆಪತ್ತು ಸಂಭವಿಸಬಹುದು ಎಂದು ಹೇಳಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವೀರೇಂದ್ರ ಮಾತನಾಡಿ, ಮದ್ಯಪಾನದಿಂದ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ. ಮೋಜು ಮಸ್ತಿಗಾಗಿ ಯುವಕರು ಮದ್ಯಪಾನದ ಚಟ ಬೆಳೆಸಿಕೊಳ್ಳುತ್ತಿರುವುದು ಆರೋಗ್ಯಕರ ಸಮಾಜಕ್ಕೆ ಮಾರಕ. ಈ ಸಾಮಾಜಿಕ ಪಿಡುಗು ತೊಲಗಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.
ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಟಿ.ಎಂ.ಭೋಜರಾಜ್, ರೋಟರಿ ಕ್ಲಬ್ ಅಧ್ಯಕ್ಷ ಪಿ.ಶಶಿಕುಮಾರ್, ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಕುಸುಮಾಧರ್, ಪುರಸಭೆ ಮಾಜಿ ಸದಸ್ಯರಾದ ಟಿ.ಆರ್.ಶ್ರೀಧರ್, ಟಿ.ಎಂ.ಮಂಜುನಾಥ್ ಇತರರಿದ್ದರು.