ಶಿಗ್ಗಾಂವಿ: ಮದ್ಯ ಮಾರಾಟ ಬಂದ್ ಮಾಡುವಂತೆ ಆಗ್ರಹಿಸಿ ತಾಲೂಕಿನ ಹುಲಗೂರ ಗ್ರಾಮದ ಮಹಿಳೆಯರು ಮದ್ಯದಂಗಡಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ತಿಂಗಳಿಂದ ಬಾಗಿಲು ಮುಚ್ಚಿದ್ದ ಮದ್ಯದಂಗಡಿಗಳು ಇತ್ತೀಚೆಗೆ ಆರಂಭಗೊಂಡಿದ್ದರಿಂದ ಮನೆಯಲ್ಲಿ ಕುಡುಕ ಗಂಡಂದಿರ ಹಾವಳಿ ಹೆಚ್ಚಾಗಿದೆ. ನಿತ್ಯ ಜಗಳ, ಬಡಿದಾಟದಿಂದ ನೆಮ್ಮದಿ ಹಾಳಾಗಿದೆ. ಇದೇ ರೀತಿ ಮುಂದುವರಿದರೆ ಹೊಲ, ಮನೆ ಮಾರಿ ಕುಟುಂಬಗಳು ಬೀದಿ ಪಾಲಾಗಬೇಕಾಗುತ್ತದೆ ಎಂದು ಮಹಿಳೆಯರು ಅಂಗಡಿ ಬಾಗಿಲು ಮುಚ್ಚಿಸಿ ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್ಐ ಕೆ.ಎನ್. ಹಳ್ಳಿ, ಅಬಕಾರಿ ಪಿಎಸ್ಐ ಗಂಗಾಧರ ಗುಡಿಮನಿ, ‘ಸರ್ಕಾರದ ಆದೇಶದ ಮೇರೆಗೆ ಮದ್ಯ ಮಾರಾಟ ಆರಂಭಿಸಲಾಗಿದೆ. ಈಗ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶ ಇರುವುದಿಲ್ಲ. ಈ ಸಮಸ್ಯೆ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಮಹಿಳೆಯರನ್ನು ಸಮಾಧಾನಪಡಿಸಿದರು. ನಂತರ ಪ್ರತಿಭಟನೆ ಹಿಂಪಡೆದರು. ಮತ್ತೆ ಎಂದಿನಂತೆ ಮದ್ಯ ಮಾರಾಟ ಮುಂದುವರಿಯಿತು.