ಜಿಲ್ಲೆ

ಮದ್ಯ ಮಾರಾಟಕ್ಕೆ ಬೆಲ್ಲದ ವಿರೋಧ

ಧಾರವಾಡ: ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಶಾಸಕ ಹಾಗೂ ಪಕ್ಷದ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಅವರೇ ಪ್ರಥಮವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟ ಆರಂಭವಾದ ಮೇಲೆ ಹಲವಾರು ಅವಾಂತರಗಳಾಗುತ್ತಿವೆ. ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಮದ್ಯ ನಿಷೇಧಕ್ಕೆ ಇದು ಸಕಾಲ ಎಂದು ಪ್ರತಿಪಾದಿಸಿದರು.

ಮದ್ಯ ನಿಷೇಧ ಕುರಿತು ದೇಶಾದ್ಯಂತ ಇನ್ನೊಮ್ಮೆ ಚರ್ಚೆ ಅಗತ್ಯ. ಹಲವು ಮಠಾಧೀಶರು, ಚಿಂತಕರು ಮದ್ಯ ನಿಷೇಧ ಕುರಿತು ಹೇಳಿರುವುದು ಸರಿಯಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಕರೊನಾದಿಂದಾಗಿ 45 ದಿನಗಳಿಂದ ಮದ್ಯ ಮಾರಾಟ ನಿಷೇಧವಿತ್ತು. ಮದ್ಯಪ್ರಿಯರು ನಿಷೇಧವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದರು. ಎಲ್ಲ ಚಟುವಟಿಕೆ ಬಂದ್ ಆಗಿದ್ದರಿಂದ ಜನರು ಉದ್ಯೋಗಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ, 3 ದಿನದಿಂದ ಮದ್ಯದ ಅಂಗಡಿಗಳ ಮುಂದಿನ ಸಾಲು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮದ್ಯ ಮಾರಾಟದಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂಬುದು ಹಲವು ರಾಜ್ಯ ಸರ್ಕಾರಗಳ ಅನಿಸಿಕೆ. ಆದರೆ, ಅಬಕಾರಿ ಇಲಾಖೆ ಮದ್ಯದ ದರಗಳಿಗೆ ಅನುಗುಣವಾಗಿ 18 ಸ್ಲಾ್ಯಬ್ ನಿಗದಿ ಮಾಡಿ ತೆರಿಗೆ ವಿಧಿಸುತ್ತದೆ. ಅದರಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗುವುದು ಮೊದಲ 4 ಸ್ಲ್ಯಾಬ್​ಗಳಿಂದ. ವಿಪರ್ಯಾಸ ಎಂದರೆ ಅದು ಬಡವರು ಕುಡಿಯುವ ಮದ್ಯಕ್ಕೆ ಸಂಬಂಧಿಸಿದ್ದಾಗಿದೆ. ಅಂದರೆ ಶೇ. 85ರಷ್ಟು ತೆರಿಗೆ ಬಡವರಿಂದ ಸಂಗ್ರಹವಾಗುತ್ತದೆ ಎಂದು ವಿಶ್ಲೇಷಿಸಿದರು.

ಮದ್ಯ ಸೇವಿಸುವ ಬಡ ಜನರು ಮನೆಯಲ್ಲಿ, ಸಮಾಜದಲ್ಲಿ ಮಾಡುವ ಅವಾಂತರ ಒಂದೆರಡಲ್ಲ. ಅವರ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮವಾಗುತ್ತಿದೆ. 45 ದಿನಗಳಿಂದ ಹುಬ್ಬಳ್ಳಿ-ಧಾರವಾಡ ಶಾಂತವಾಗಿತ್ತು. ಮದ್ಯ ಮಾರಾಟ ಆರಂಭವಾದ ನಂತರ ಹಲವು ಅಪಘಾತ ಸಂಭವಿಸುತ್ತಿವೆ. ರಾಜ್ಯದ ಬೇರೆ ಬೇರೆ ಕಡೆಯಲ್ಲಿ ಕೊಲೆ ಸೇರಿ ಬೇರೆ ಬೇರೆ ಅಪರಾಧ ಚಟುವಟಿಕೆಗಳು ನಡೆಯತೊಡಗಿವೆೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಮದ್ಯಪಾನ ವಿರೋಧಿ. ಅವರು ಕೇವಲ ಜನರ ಹಿತಕ್ಕಾಗಿ ಕೆಲಸ ಮಾಡುವವರು ಎಂದು ಬಣ್ಣಿಸಿದ ಅರವಿಂದ ಬೆಲ್ಲದ, ರಾಜ್ಯ ಹಾಗೂ ದೇಶಾದ್ಯಂತ ಮದ್ಯ ಮಾರಾಟ ನಿಷೇಧ ಕೋರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದರು.

ಕೇವಲ ಕರ್ನಾಟಕದಲ್ಲಿ ಮದ್ಯ ಲಾಕ್​ಡೌನ್ ಆದರೆ ಉಪಯೋಗವಿಲ್ಲ. ಇಡಿ ದೇಶದಲ್ಲಿ ಲಾಕ್​ಡೌನ್ ಆಗಬೇಕು. ಒಂದು ರಾಜ್ಯ ನಿಷೇಧಿಸಿದರೆ ಪಕ್ಕದ ರಾಜ್ಯಗಳಿಂದ ಸರಬರಾಜು ಆಗುತ್ತದೆ. ಮದ್ಯ ಮಾರಾಟದ ಆದಾಯದ ಬಗ್ಗೆ ಮಾತನಾಡಬೇಕಾದರೆ ಗುಜರಾತ್ ಮಾದರಿಯಾಗಿದೆ. ಏಕೆಂದರೆ ಆ ರಾಜ್ಯದಲ್ಲಿ ಕಾಯಂ ಮದ್ಯ ನಿಷೇಧ ಜಾರಿಯಲ್ಲಿದೆ. ಬೇರೆ ಮೂಲಗಳಿಂದಲೂ ಸರ್ಕಾರಕ್ಕೆ ಆದಾಯ ಬರುತ್ತದೆ. ಆದ್ದರಿಂದ ಮದ್ಯ ನಿಷೇಧ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಈ ಬಗ್ಗೆ ಈಗಾಗಲೇ ರಾಜ್ಯದ ಪ್ರಮುಖ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಚಿಂತಕರೊಂದಿಗೆ ರ್ಚಚಿಸಿದ್ದೇನೆ ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ಬಸವರಾಜ ಗರಗ, ಪೂರ್ಣಾ ಪಾಟೀಲ, ಮಂಜುಳಾ ಅಕ್ಕೂರ, ಮಲ್ಲಿಕಾರ್ಜುನ ಹೊರಕೇರಿ, ಸಂಜಯ ಕಪಟಕರ, ಶಿವು ಹಿರೇಮಠ, ಪ್ರಕಾಶ ಗೋಡಬೋಲೆ, ಶಿವಣ್ಣ ಬಡವಣ್ಣವರ, ಬಸವರಾಜ ಮುತ್ತಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.