ಅರಸೀಕೆರೆ: ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಹಾಗೂ ಪರವಾನಗಿ ಮದ್ಯ ಮರಾಟದ ಅಂಗಡಿಗಳು ದರಪಟ್ಟಿ ಫಲಕ ಹಾಕದಿದ್ದರೆ ಬೀದಿಗಳಿದು ಹೋರಾಟ ನಡೆಸುತ್ತೇವೆ ಎಂದು ಮದ್ಯಪಾನ ಪ್ರಿಯರ ಹೋರಾಟ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್ ಬೋರೆಹಳ್ಳಿ ಎಚ್ಚರಿಕೆ ನೀಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕೆಲ ಮದ್ಯ ಮಾರಾಟ ಮಾಡುವ ಅಂಗಡಿಗಳಲ್ಲಿ ಜನರಿಂದ ಸುಲಿಗೆ ಮಾಡಲಾಗುತ್ತಿದೆ. ಹೋಟೆಲ್, ಸಿನಿಮಾ ಮಂದಿರ ಸೇರಿ ಎಲ್ಲೆಡೆ ದರಪಟ್ಟಿ ಹಾಕುವ ಪದ್ಧತಿಯಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಎಂಎಸ್‌ಐಎಲ್ ಹಾಗೂ ಪರವಾನಗಿ ಪಡೆದಿರುವ ಮದ್ಯ ಮಾರಾಟ ಮಾಡುವ ಅಂಗಡಿಗಳು ನಿಯಮ ಪಾಲಿಸುತ್ತಿಲ್ಲ. ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಬಡ ಜನರ ಜೇಬಿಗೆ ಬರೆಹಾಕುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ. ಅಬಕಾರಿ ಸಚಿವರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿದರು.
ಒತ್ತಾಯ: ಮದ್ಯವ್ಯಸನಿಗಳ ಆರೋಗ್ಯ ತಪಾಸಣೆಗೆ ಒತ್ತು ನೀಡುವುದು ಅಗತ್ಯವಾಗಿದ್ದು ಸರ್ಕಾರ ತಕ್ಷಣವೇ ಪ್ರತ್ಯೇಕ ನಿಗಮ ಆರಂಭಿಸಬೇಕು. ಜೀವ ವಿಮೆ ಮಾಡಿಸುವುದು ಸೇರಿ ಕುಡಿತದ ಚಟದಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ತಮ್ಮ 20ಕ್ಕೂ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವಂತೆ ಅಬಕಾರಿ ಸಚಿವರಿಗೆ ಮನವಿ ಮಾಡುವುದಾಗಿ ಹೇಳಿದರು. ಪ್ರಧಾನಕಾರ್ಯದರ್ಶಿ ಕರಗುಂದ ರಮೇಶ್, ಸಿದ್ದೇಶ್ ಗೋಷ್ಟಿಯಲ್ಲಿದ್ದರು.