ಜಿಲ್ಲೆ

ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ

ಹನೂರು: ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದವರಿಗೆ ಕಿರುಕುಳ ನೀಡಲಾಗುತ್ತಿದೆ. ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ನೀಡಲು ಹಿಂದೇಟು ಹಾಕಲಾಗುತ್ತಿದೆ. ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ..

ಇದು ಹನೂರು ಪೊಲೀಸ್ ಠಾಣೆಯಲ್ಲಿ ಮಂಗಳವಾರ ಡಿವೈಎಸ್ಪಿ ಧರ್ಮೇಂದ್ರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಎಸ್ಸಿ, ಎಸ್ಟಿ ಮುಖಂಡರ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂದ ಪ್ರಮುಖ ದೂರುಗಳು. ಸಭೆಯಲ್ಲಿ ಕೆಂಪಯ್ಯನಹಟ್ಟಿ ಗ್ರಾಮದ ಮುತ್ತು ಮಾತನಾಡಿ, ಗ್ರಾಮದ ಸೆಲೂನ್ ಶಾಪ್‌ನಲ್ಲಿ ಪರಿಶಿಷ್ಟ ಜಾತಿಯವರಿಗೆ ಹೇರ್ ಕಟಿಂಗ್ ಮಾಡಲು ನಿರಾಕರಿಸಲಾಗುತ್ತಿದೆ. ಇದರಿಂದ ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ ಎಂದು ದೂರಿದರು.

ಲಕ್ಷ್ಮಯ್ಯನ ದೊಡ್ಡಿಯ ಸಂತೋಷ್ ಮಾತನಾಡಿ, ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ವೇಳೆ ಪರಿಶಿಷ್ಟರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು. ಹನೂರಿನ ಪಪಂ ಸದಸ್ಯ ಸಂಪತ್‌ಕುಮಾರ್ ಮಾತನಾಡಿ, ಸಮುದಾಯದ ಜನರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇತ್ತ ಪಪಂನಲ್ಲಿ ಎಸ್ಸಿ, ಎಸ್ಟಿ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಂಡಳ್ಳಿ ಗ್ರಾಮದ ವೆಂಕಟಾಚಲ ಮಾತನಾಡಿ, ಗ್ರಾಮದ ಜನವಸತಿ ಪ್ರದೇಶದ ಮಧ್ಯದಲ್ಲೇ ಮದ್ಯದಂಗಡಿ ಇದ್ದು ಕುಡುಕರ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಬಾರ್ ಸ್ಥಳಾಂತರ ಮಾಡಬೇಕು. ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಪ್ರಯಾಣಿಕರ ತಂಗುದಾಣ ಕೆಡವಿ ಹೊಸದಾಗಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಮಣಗಳ್ಳಿ ಮಾಲಿಂಗ ಮಾತನಾಡಿ, ತಾಲೂಕಿನ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟವಾಗುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಹೂಗ್ಯಂ ಹಾಗೂ ಮಿಣ್ಯಂ ಭಾಗದಲ್ಲಿ ಪರಿಶಿಷ್ಟರನ್ನು ಕೀಳಾಗಿ ಕಾಣಲಾಗುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ರಾಮಾಪುರ ಭಾಗದಲ್ಲಿ ಗಾಂಜಾ ಮಾರಾಟ ಹೆಚ್ಚಾಗುತ್ತಿದೆ. ಕಂದಾಯ ಇಲಾಖೆ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ದಲಿತರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇದೆ. ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಪರಾಧಗಳಿಗೆ ಕಡಿವಾಣ ಹಾಕುವಂತೆ ವಿವಿಧ ಗ್ರಾಮಗಳ ಮುಖಂಡರು ಒತ್ತಾಯಿಸಿದರು.

ಸಮಸ್ಯೆ ಆಲಿಸಿದ ಬಳಿಕ ಡಿವೈಎಸ್ಪಿ ಧರ್ಮೇಂದ್ರ ಮಾತನಾಡಿ, ಎಸ್ಪಿ ಡಾ.ಬಿ.ಟಿ ಕವಿತಾ ಅವರ ಮಾರ್ಗದರ್ಶನದಲ್ಲಿ ಗಾಂಜಾ ಸಾಗಣೆ, ಮಾರಾಟದ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗುತ್ತಿದೆ. ತಾರತಮ್ಯ ಸಂಬಂಧ ಗ್ರಾಮಗಳಲ್ಲಿ ಶಾಂತಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.

ಇನ್‌ಸ್ಪೆಕ್ಟರ್‌ಗಳಾದ ಹನೂರಿನ ಶಶಿಕುಮಾರ್, ಕೊಳ್ಳೇಗಾಲದ ಶಿವಮಾದಯ್ಯ, ಮ.ಬೆಟ್ಟದ ಜಗದೀಶ್, ರಾಮಾಪುರದ ಶೇಷಾದ್ರಿ, ಶಿರಸ್ತೇದಾರ್ ನಾಗೇಂದ್ರ, ಮುಖಂಡರಾದ ಲಿಂಗರಾಜು, ವೀರಭದ್ರ, ಪುಟ್ಟವೀರನಾಯ್ಕ, ನಾಗರಾಜು, ಶ್ರೀಕಂಠಮೂರ್ತಿ, ಮಾದೇಶ್, ಕಿರಣ್, ಪ್ರಕಾಶ್ ಇನ್ನಿತರರು ಇದ್ದರು.