ಜಿಲ್ಲೆ

ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ

ಸಕಲೇಶಪುರ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಿತಿ ಮೀರಿರುವ ಮದ್ಯ ಅಕ್ರಮ ಮಾರಾಟಕ್ಕೆ ತಡೆ ಒಡ್ಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಲಸುಲಿಗೆಯ ಗೌತಮ ನಗರದ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು, ಬಡವರು ಹೆಚ್ಚು ವಾಸಿಸುತ್ತಿದ್ದು, ಬಹುತೇಕ ಕುಟುಂಬಗಳ ಗಂಡಸರು ಮದ್ಯಕ್ಕೆ ದಾಸರಾಗಿರುವುದರಿಂದ ದುಡಿಯುವ ಹಣವನ್ನು ಮದ್ಯ ಕುಡಿಯಲು ಬಳಸುತ್ತಿದ್ದಾರೆ. ಇದರಿಂದ ಹಲವು ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆಯಿದೆ. ಗ್ರಾಪಂ ವ್ಯಾಪ್ತಿಯ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಈ ಕುರಿತು ಹಲವು ಬಾರಿ ಅಬಕಾರಿ ಇಲಾಖೆಯವರಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಗ್ರಾಪಂನವರು ಇತ್ತ ಗಮನಹರಿಸಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ಹಲಸುಲಿಗೆ ಗ್ರಾಪಂ ವ್ಯಾಪ್ತಿಯ ಗೌತಮ ನಗರದ ನಿವಾಸಿಗಳು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷೆ ಜಯಂತಿ ಮಲ್ಲೇಶ್, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಗಿಡ್ಡೇಗೌಡ, ಕೃಷ್ಣ, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳಾದ ಭಾಗ್ಯಾ, ಸುಶೀಲಾ, ಸಾವಿತ್ರಿ, ಪ್ರೇಮ ಮುಂತಾದವರು ಹಾಜರಿದ್ದರು.