ಮದ್ಯ ಅಕ್ರಮ ಮಾರಾಟ ವಿರೋಧಿಸಿ ಬಾಗೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. 
ಜಿಲ್ಲೆ

ಮದ್ಯ ಅಕ್ರಮ ಮಾರಾಟ ವಿರೋಧಿಸಿ ಪ್ರತಿಭಟನೆ

Hassan

ಸಕಲೇಶಪುರ: ತಾಲೂಕಿನ ಬಾಗೆ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ವಿರೋಧಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಸಾಕಷ್ಟು ಮನೆ ಹಾಗೂ ಅಂಗಡಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರಾಟ ನಡೆಸಲಾಗುತ್ತಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಿದ್ದು, ದುಡಿದ ಹಣವನ್ನೆಲ್ಲ ಮದ್ಯದಂಗಡಿಗೆ ಸುರಿಯುತ್ತಿರುವ ಕಾರಣ ಊಟಕ್ಕೂ ಹಣವಿಲ್ಲದಷ್ಟು ಬಡತನ ಸೃಷ್ಟಿಯಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮದ್ಯ ಅಕ್ರಮ ಮಾರಾಟಕ್ಕೆ ರಾಜಕೀಯ ನಾಯಕರು ಬೆಂಗಾವಲಾಗಿ ನಿಂತಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. 2004ರಲ್ಲಿ ಇದೆ ಗ್ರಾಮದಲ್ಲಿ ಮದ್ಯ ಸೇವನೆಯಿಂದ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಆದ್ದರಿಂದ, ಈ ಕಹಿ ಘಟನೆ ಮರುಕಳಿಸುವ ಮುನ್ನ ಮದ್ಯ ಅಕ್ರಮ ಮಾರಾಟ ತಡೆಯಬೇಕು. ಇಲ್ಲವಾದಲ್ಲಿ ಪಟ್ಟಣದ ಅಬಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರತಿಭಟನಕಾರರು ಬಾಗೆ ಗ್ರಾ.ಪಂ. ಅಧ್ಯಕ್ಷ ಜಯಶಂಕರ್ ಅವರಿಗೆ ಮನವಿ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್, ಅಬಕಾರಿ ನಿರೀಕ್ಷಕ ವೆಂಕಟೇಶ್ ಭೇಟಿ ನೀಡಿದ್ದರು. ಪ್ರತಿಭಟನೆಯಲ್ಲಿ ಜನನಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪಾ ರಾಜೇಶ್, ಪದಾಧಿಕಾರಿಗಳಾದ ಸೌಜನ್ಯ, ವನಜಾಕ್ಷಿ, ಕರವೇ ಮುಖಂಡರಾದ ರವಿ, ಶರಣ್ ಇತರರಿದ್ದರು.