ಮದ್ದೂರು ತಾಲೂಕಿನ ನಿಡಘಟ್ಟ ತಿಪ್ಪೂರು ಮಾರ್ಗದ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. 
ಜಿಲ್ಲೆ

ಮದ್ದೂರು ತಾಲೂಕಿನಲ್ಲಿ ಭಾರಿ ಮಳೆಗೆ ಅಪಾರ ನಷ್ಟ

ದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರಿ ಬಿರುಗಾಳಿ ಮಳೆಗೆ 2 ಮೇಕೆ ಮೃತಪಟ್ಟು, ತೆಂಗಿನಕಾಯಿ ಹಾಗೂ ರಸ್ತೆ, ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಮಾದಾಪುರದೊಡ್ಡಿ, ತಿಪ್ಪೂರು, ಮಾರಂಗೆರೆ, ಕುದರಗುಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆ ಹಾನಿಯಾಗಿದೆ.

ಮಾದಾಪುರದೊಡ್ಡಿ: ತಾಲೂಕಿನ ಮಾದಾಪುರದೊಡ್ಡಿ ಗ್ರಾಮದಲ್ಲಿ ಮಳೆ ಸುರಿದ ಪರಿಣಾಮ ತೋಟದ ಮನೆಯಲ್ಲಿ ಹಾಕಿದ್ದ ಜಯಮುದ್ದೇಗೌಡರ 75 ಸಾವಿರ ತೆಂಗಿನಕಾಯಿ, ಮರಿಸ್ವಾಮಿ ಅವರ 9 ಸಾವಿರ ತೆಂಗಿನಕಾಯಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಕೊಚ್ಚಿ ಹೋದ ಸೇತುವೆ: ತಿಪ್ಪೂರು ನಿಡಘಟ್ಟ ಸಂಪರ್ಕ ಕಲ್ಪಿಸುವ ಸೇತುವೆ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿ ಈ ಮಾರ್ಗದ ಜನರು 8 ಕಿ.ಮೀ. ಸುತ್ತಿಕೊಂಡು ತಮ್ಮ ಗ್ರಾಮಗಳಿಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಜತೆಗೆ ಬಾಳೆತೋಟ, ನಾಟಿ ಮಾಡಿದ್ದ ಭತ್ತದ ಫಸಲು, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿವೆ. ತಿಪ್ಪೂರು, ಮಾದಾಪುರದೊಡ್ಡಿ ಹಾಗೂ ಮಾದನಾಯಕನಹಳ್ಳಿ ಗ್ರಾಮದ ಹಲವು ಸೇತುವೆ ಹಾಗೂ ನಾಲೆಗಳು ಮಳೆಗೆ ಜಖಂಗೊಂಡಿವೆ.