ಮದ್ದೂರು: ಪಟ್ಟಣದ ಅಧಿದೇವತೆ ಶ್ರೀ ಮದ್ದೂರಮ್ಮನವರ ಸಾಕು ಮಗ ಶ್ರೀ ಸಿಡಿರಾಯಣ್ಣನವರ ಉತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಮಠಮನೆಯಿಂದ ಸಂಜೆ 4 ಗಂಟೆಗೆ ತಮಟೆ ನಗಾರಿ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮದ್ದೂರಮ್ಮ ದೇವಾಲಯಕ್ಕೆ ಸಿಡಿರಾಯಣ್ಣ ಆಗಮಿಸಿತು. ದಾರಿಯುದ್ದಕ್ಕೂ ಭಕ್ತರು ಸಿಡಿರಾಯಣ್ಣ ಮೂರ್ತಿಗೆ ಕಡ್ಲೆಪುರಿ ಸುರಿಯುವ ಮೂಲಕ ಭಕ್ತಿ ಮೆರೆದರು. ಸಿಡಿರಾಯಣ್ಣ ಉತ್ಸವದಲ್ಲಿ ಮಕ್ಕಳನ್ನು ಸಿಡಿ ಆಡಿಸುವುದರಿಂದ ಸಿಡುಬು ಸೇರಿದಂತೆ ಯಾವುದೇ ರೋಗಗಳು ಬರುವುದಿಲ್ಲ ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನವ ದಂಪತಿ ಮೊದಲ ಮಗುವನ್ನು ಪಡೆದು ಸಿಡಿಯಾಡಿಸುವುದು ವಾಡಿಕೆ. ವಿವಾಹ, ಸಂತಾನ ಪ್ರಾಪ್ತಿಗೆ ಹರಕೆ ಕಟ್ಟಿ ಕೊಂಡವರು ಸಿಡಿ ಉತ್ಸವಕ್ಕೆ ಆಗಮಿಸಿದ್ದರು.
ಶಾಸಕ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಮಜ್ಜಿಗೆ ವಿತರಿಸಲಾಯಿತು. ದಾನಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹ ಭಕ್ತರಿಗೆ ಮೊಸರನ್ನ, ಬಾತು, ಮಜ್ಜಿಗೆ ಪಾನಕ ಸೇರಿದಂತೆ ವಿವಿಧ ಪ್ರಸಾದ ವಿತರಿಸಿದರು. ಸಿಡಿರಾಯಣ್ಣ ಉತ್ಸವ ಅಂಗವಾಗಿ ಮದ್ದೂರಮ್ಮ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಲ್ಲಕ್ಕಿ ಮೆರವಣಿಗೆ ಇಂದು: ಶುಕ್ರವಾರ ಸಂಜೆ 4ಕ್ಕೆ ಶ್ರೀ ಮದ್ದೂರಮ್ಮನವರ ಓಕುಳಿ ಸೇವೆ, ಸಂಜೆ 6.30 ಗಂಟೆಗೆ ಉಯ್ಯಲೆ ಉತ್ಸವ, ರಾತ್ರಿ 9 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೇ 20ರಂದು ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮನವರಿಗೆ ಎಣ್ಣೆ ಮಜ್ಜನ ಸೇವೆ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರಲಿದೆ. ರಾತ್ರಿ 9 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.