ಕೊಳ್ಳೇಗಾಲ: ಹದಿನೆಂಟು ವರ್ಷ ತುಂಬದಿದ್ದರೂ ಪಾಲಕರು ನನಗೆ ವಿವಾಹ ಮಾಡಲು ಮುಂದಾಗಿದ್ದಾರೆ ಎಂದು 15 ವರ್ಷದ ಬಾಲಕಿಯೊಬ್ಬಳು ಸೋಮವಾರ ಗ್ರಾಮಾಂತರ ಠಾಣೆ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾಳೆ.
ನನಗೆ 18 ವರ್ಷ ತುಂಬಿಲ್ಲ. ಆದರೂ ಹನೂರು ತಾಲೂಕಿನ ಯುವಕನೊಬ್ಬನ ಜತೆ ಮದುವೆ ಮಾಡಲು ಪಾಲಕರು ನಿರ್ಧಸಿದ್ದಾರೆ. ಅಪ್ರಾಪ್ತ ಮದುವೆಯಾಗುವುದು ಕಾನೂನು ಬಾಹಿರ ಎಂದು ಶಾಲೆಯಲ್ಲಿನ ಅರಿವು ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದು, ಈ ಬಗ್ಗೆ ನನಗೆ ಅರಿವಿದೆ. ಹಾಗಾಗಿ ನಾನು ಮದುವೆಯಾಗಲು ನಿರಾಕರಿಸಿ ಬಂದಿದ್ದೇನೆ ಎಂದು ತಾಲೂಕಿನ ಗ್ರಾಮವೊಂದರ ಬಾಲಕಿ ಸಹಾಯಕ ಸಬ್ ಇನ್‌ಸ್ಪೆಪೆಕ್ಟರ್ ಮಲ್ಲಿಕಾರ್ಜುನ್ ಅವರ ಬಳಿ ಅಳಲು ತೋಡಿಕೊಂಡಿದ್ದಾಳೆ.
ಈ ವೇಳೆ ಪಿಎಸ್‌ಐ ಸುಪ್ರೀತ್ ಹಾಗೂ ಎಎಸ್‌ಐ ಮಲ್ಲಿಕಾರ್ಜುನ್, ತಕ್ಷಣವೇ ಬಾಲಕಿ ಪಾಲಕರನ್ನು ಠಾಣೆಗೆ ಕರೆಸಿ ಇಬ್ಬರಿಗೂ ಕಾನೂನು ಅರಿವು ಮೂಡಿಸಿದರಲ್ಲದೆ, ಯಾವುದೇ ಕಾರಣಕ್ಕೂ ಮದುವೆ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ. ಸದ್ಯ ಬಾಲಕಿಯನ್ನು ಚಾಮರಾಜನಗರದ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.