ಚಾಮರಾಜನಗರ: ಸಂಬಂಧಿಕರ ಮದುವೆಗೆ ಗೆಳೆಯನೊಂದಿಗೆ ಬಂದಿದ್ದ ಐವರು ವಿದ್ಯಾರ್ಥಿಗಳು, ಕಾರು ಚಲಾಯಿಸುವಾಗ ಶನಿವಾರ ರಾತ್ರಿ ಅಪಘಾತವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟರೇ, ಮೂವರಿಗೆ ಗಂಭೀರ ಗಾಯಗಳಾಗಿವೆ.
ಮೈಸೂರಿನ ಆರ್.ಬಿ ನಗರದ ನಂದನ್ (24) ಮತ್ತು ಎಂ.ಎಸ್ ನಗರದ ಜೀವನ್ (25) ಮೃತ ದುರ್ದೈವಿಗಳು. ಮೈಸೂರಿನ ಜೆಪಿ ನಗರದ ನಿವಾಸಿಗಳಾದ ಶಶಾಂಕ್(24), ಧನುಷ್ (25) ಹಾಗೂ ಗುಂಡ್ಲುಪೇಟೆಯ ನಿವಾಸಿ ಸುನೀಲ್(25) ಅಪಘಾತದಲ್ಲಿ ಗಾಯಗೊಂಡ ಯುವಕರು. ಈ ಯುವಕರು ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಗೆಳೆಯನ ಸಂಬಂಧಿಕರ ಮದುವೆಗಾಗಿ ತಾಲೂಕಿನ ಕೋಳಿಪಾಳ್ಯ ಸಮೀಪದ ಬೆಜ್ಜಲಪಾಳ್ಯ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿಯ ವೇಳೆಯಲ್ಲಿ ಸರಿಯಾಗಿ ನಿದ್ರೆ ಬರಲಿಲ್ಲ ಎಂಬ ಕಾರಣಕ್ಕೆ ಐದು ಯುವಕರು ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಪುಣಜನೂರು ಚೆಕ್‌ಪೋಸ್ಟ್ ಸಮೀಪದ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮವಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ಮೂವರಿಗೆ ಗಭೀರ ಗಾಯಗಳಾಗಿದೆ.
ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಯುವಕರ ಮೃತ ದೇಹ ಹಾಗೂ ಗಾಯಾಳುಗಳನ್ನು ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಗೆ ರವಾನಿಸಿದರು. ಮೂವರಲ್ಲಿ ಓರ್ವನ ಕಾಲಿಗೆ ಗಂಭೀರವಾದ ಗಾಯವಾಗಿದ್ದು, ಮೂವರ ಪ್ರಾಣಕ್ಕೆ ಯಾವುದೇ ಆತಂಕವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದರು. ಮೃತ ಯುವಕರ ಸಂಬಂಧಿಕರ ಆಕ್ರಂದನ ಸಿಮ್ಸ್ ಆಸ್ಪತ್ರೆಯ ಶವಗಾರದ ಮುಂದೆ ಮನಃಕುಲುಕುವಂತಿತ್ತು. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.