ಜಿಲ್ಲೆ

ಮದಕರಿನಾಯಕರ ಪುಣ್ಯಸ್ಮರಣೆ 15ಕ್ಕೆ

ಚಿತ್ರದುರ್ಗ: ರಾಜವೀರ ಮದಕರಿನಾಯಕರ 242ನೇ ಪುಣ್ಯಸ್ಮರಣೆ ಮೇ 15ರಂದು ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದು ನಾಯಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮದಕರಿನಾಯಕರ ಪ್ರತಿಮೆ ವಿಶೇಷವಾಗಿ ಅಲಂಕರಿಸಿ, ಸರ್ವರಿಗೂ ಪುಷ್ಪನಮನ ಸಲ್ಲಿಸಲು, ಪ್ರತಿಮೆ ಮುಂಭಾಗ ಮೇಣದ ಬತ್ತಿ ಹಚ್ಚಲು ಅವಕಾಶ ಕಲ್ಪಿಸಲಾಗುವುದು. ಎಲ್ಲ ಸಮುದಾಯದವರು ಭಾಗವಹಿಸಬಹುದು ಎಂದರು.

ದುರ್ಗವನ್ನಾಳಿದ ಮದಕರಿನಾಯಕರ ಸ್ಮರಣೆಯಲ್ಲಿ ಹಿಂದೆ ಬಿದ್ದಿದ್ದೇವೆ ಅನಿಸುತ್ತಿದೆ. ಮುಂದಿನ ವರ್ಷದಿಂದ ಸ್ಮರಣೋತ್ಸವ, ಪಟ್ಟಾಭಿಷೇಕ, ಜಯಂತಿ ಎಲ್ಲವನ್ನೂ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಿಸುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಕಳೆದ ವರ್ಷ ಭರವಸೆ ನೀಡಿದ್ದರು. ಇಂದಿಗೂ ಈಡೇರಿಲ್ಲ. ಪೂರ್ಣಗೊಳ್ಳುವವರೆಗೂ ಒತ್ತಾಯ ನಿರಂತರ ಎಂದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಮದಕರಿನಾಯಕರ ಜಯಂತಿಯಾಗಲಿ, ಪುಣ್ಯಸ್ಮರಣೆಯಾಗಲಿ ಕೇವಲ ನಾಯಕ ಸಮುದಾಯಕ್ಕೆ ಸೀಮಿತವಲ್ಲ. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಜೆ.ಎನ್.ಕೋಟೆ ಗುರುಸಿದ್ಧಪ್ಪ, ಕಾಟಿಹಳ್ಳಿ ಕರಿಯಪ್ಪ, ಡಿ.ಗೋಪಾಲಸ್ವಾಮಿ ನಾಯಕ, ಎಚ್.ಅಂಜಿನಪ್ಪ ಇತರರಿದ್ದರು.