ಜಿಲ್ಲೆ

ಮದಕರಿ ಜಯಂತ್ಯುತ್ಸವ ಸಡಗರ

ಚಿತ್ರದುರ್ಗ: ಶೌರ್ಯ, ಪರಾಕ್ರಮ, ಜನಪರ ಆಡಳಿತಕ್ಕೆ ಹೆಸರಾದ ರಾಜವೀರ ಮದಕರಿನಾಯಕ ಜಯಂತ್ಯುತ್ಸವ ಕೋಟೆನಗರಿಯಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆಯಿತು.

ಜಯಂತ್ಯುತ್ಸವದ ಅಂಗವಾಗಿ ಪಾಳೆಗಾರರ ಕುಲದೇವತೆ ಉಚ್ಚಂಗಿಯಲ್ಲಮ್ಮ, ಆರಾಧ್ಯ ದೈವ ಏಕನಾಥೇಶ್ವರಿ, ನಗರದೇವತೆ ಬರಗೇರಮ್ಮ ದೇವಿಯರ ಮೂರ್ತಿ, ಮದಕರಿನಾಯಕರ ಮನೆದೇವರಾದ ನೀರ್ತಡಿ ರಂಗನಾಥ ಸ್ವಾಮಿಗೂ ವಿಶೇಷ ಪೂಜೆ ಅಲಂಕಾರ ಸೇವೆ ಸಲ್ಲಿಸಲಾಯಿತು.

ಮದಕರಿನಾಯಕ ಪ್ರತಿಮೆಗೆ ಬೃಹತ್ ಹೂವಿನ ಹಾರದೊಂದಿಗೆ ಇಡೀ ವೃತ್ತವನ್ನು ಪುಷ್ಪ, ವಿದ್ಯುದ್ದೀಪಾಲಂಕಾರದೊಂದಿಗೆ ವೈವಿಧ್ಯಮಯವಾಗಿ ಸಿಂಗರಿಸಲಾಗಿತ್ತು. ಸೆಲ್ಫಿ ತೆಗೆದುಕೊಳ್ಳಲು ನೂರಾರು ಮಂದಿ ಮುಗಿಬಿದ್ದಿದ್ದರು. ಸಂಜೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದ ಉತ್ಸವ ಇನ್ನಷ್ಟು ಕಳೆಗಟ್ಟಿತು.

ಕನಕ ವೃತ್ತದ ಬಳಿ ಬೃಹತ್ ಮೆರವಣಿಗೆಗೆ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮದಕರಿ ನಾಯಕ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಮದಕರಿನಾಯಕ ಭಾವಚಿತ್ರ, ನಟ ಸುದೀಪ್, ರಾಜಲಾಂಛನ ಸೇರಿ ಇತರ ಬಾವುಟಗಳು ರಾರಾಜಿಸಿದವು. ಡಿಜೆ ಸದ್ದಿಗೆ ಯುವಕರು-ಯುವತಿಯರು ಕುಣಿದು ಕುಪ್ಪಳಿಸಿದರು.

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಕಮಲ್ ಹಾಸನ್, ದರ್ಶನ್, ಸುದೀಪ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಉಪೇಂದ್ರ, ರವಿಚಂದ್ರನ್ ಸೇರಿ ಇತರ ನಟರ ಸಿನಿಮಾ ಹಾಡುಗಳಿಗೆ, ಮದಕರಿನಾಯಕನ ಸಂಭಾಷಣೆಯುಳ್ಳ ಸಿನಿಮಾ ಡೈಲಾಗ್‌ಗಳಿಗೆ ಜನರು ಕೇಕೆ ಹಾಕಿ ಸಂಭ್ರಮಿಸಿದರು.

ಹೊಳಲ್ಕೆರೆ ರಸ್ತೆ, ಸಂಗೊಳ್ಳಿ ರಾಯಣ್ಣ, ಗಾಂಧಿ, ಎಸ್‌ಬಿಐ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸಂಚರಿಸಿ ಮದಕರಿನಾಯಕ ವೃತ್ತ ತಲುಪಿದಾಗ ನೆರೆದಿದ್ದವ ಹರ್ಷೋದ್ಘಾರ ಮುಗಿಲುಮುಟ್ಟಿತು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ತಾಲೂಕಾಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯ ದೀಪಕ್ ಕುಮಾರ್, ಚಳ್ಳಕೆರೆ ನಗರಸಭೆ ಸದಸ್ಯ ಕೆ.ಸಿ.ನಾಗರಾಜ್, ಪ್ರಾಚಾರ್ಯ ಡಾ.ಎಚ್.ಗುಡ್ಡದೇಶ್ವರಪ್ಪ, ಮದಕರಿನಾಯಕ ವಿದ್ಯಾಸಂಸ್ಥೆಯ ಸಂದೀಪ್, ಮುಖಂಡರಾದ ಡಾ.ಬಿ.ತಿಪ್ಪೇಸ್ವಾಮಿ ಜೆಜೆ ಹಟ್ಟಿ, ಅಶ್ವಕ್ ಆಲಿ, ಇ.ಶಿವಕುಮಾರ್, ಜೆಎನ್ ಕೋಟೆ ಗುರುಸಿದ್ದಪ್ಪ, ಎಚ್.ಅಂಜಿನಪ್ಪ, ಸೈಯದ್ ಇಫ್ರಾನ್, ಸೋಮೇಂದ್ರ, ಗೋಪಾಲಸ್ವಾಮಿ ನಾಯಕ ಇತರರಿದ್ದರು.

ಸರ್ವ ಸಮುದಾಯದ ನಾಯಕ: ಚಿತ್ರದುರ್ಗಕ್ಕೆ ಮದಕರಿನಾಯಕನ ಕೊಡುಗೆ ಅನನ್ಯ. ಅದನ್ನು ಮರೆಯಲು ಸಾಧ್ಯವಿಲ್ಲ. ಪಾಳೆಗಾರರ ಆಡಳಿತಾವಧಿಯಲ್ಲಿ ಕೆರೆ-ಕಟ್ಟೆಗಳು, ದೇಗುಲಗಳು ಕಟ್ಟಿಸಿದರು. ಎಲ್ಲ ವರ್ಗದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಬಣ್ಣಿಸಿದರು. ಎಲ್ಲ ಸಮಾಜದ ಹಿತ ಕಾಯುವ ಕೆಲಸ ನಾಯಕ ಸಮಾಜ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅದಕ್ಕೆ ಪಾಳೆಗಾರರ ಆಡಳಿತವೇ ನಿದರ್ಶನ. ಮದಕರಿನಾಯಕ ಒಂದು ಸಮಾಜಕ್ಕೆ ಸೇರಿದ ದೊರೆಯಲ್ಲ, ಸರ್ವರೂ ಪ್ರೀತಿಸುತ್ತಾರೆ. ಹೀಗಾಗಿ ಕೂಡಿ ಬಾಳುವ ಮೂಲಕ ಪ್ರಗತಿಯತ್ತ ಗಮನ ಹರಿಸೋಣ ಎಂದು ಸಲಹೆ ನೀಡಿದರು.

ಪ್ರಬಂಧ ಸ್ಪರ್ಧೆ: ಚಿತ್ರದುರ್ಗದ ಮದಕರಿನಾಯಕ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಜೋಗಿಮಟ್ಟಿ ಗೆಳೆಯರ ಬಳಗ, ವಿದ್ಯಾಸಂಸ್ಥೆಯಿಂದ ಪರಿಸರ ಮತ್ತು ಜಲ ಸಂರಕ್ಷಣೆಯಲ್ಲಿ ಪಾಳೆಗಾರರ ಪಾತ್ರ ಕುರಿತ ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಸಂಸ್ಥೆ ಕಾರ್ಯದರ್ಶಿ ಎಸ್.ಸಂದೀಪ್ ಚಾಲನೆ ನೀಡಿದರು. ಮುಖಂಡರಾದ ರಾಜ ಮದಕರಿನಾಯಕ, ಜಿ.ಅಂಬಿಕಾ, ವಕೀಲ ಡಾ.ಎಂ.ಸಿ.ನರಹರಿ, ಟಿ.ರುದ್ರಮುನಿ, ಕೆ.ಕ್ಯಾತಣ್ಣ, ಎಸ್.ರಾಘವೇಂದ್ರ, ಪತ್ರಕರ್ತರಾದ ಮಾಲತೇಶ್ ಅರಸ್ ಹರ್ತಿಕೋಟೆ, ಎಸ್.ಟಿ.ನವೀನ್‌ಕುಮಾರ್ ಇತರರಿದ್ದರು.