ಹುಬ್ಬಳ್ಳಿ : ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಿದೆ. ಈ ಮೂಲಕ ತಾನು ಹಿಂದು ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಪ್ರಣಾಳಿಕೆ ಮೂಲಕ ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ ತೋರಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್, ಬಜರಂಗ ದಳ, ವಿಶ್ವಹಿಂದು ಪರಿಷತ್ ದೇಶಭಕ್ತ ಸಂಘಟನೆಗಳು. ಇವುಗಳನ್ನು ವಿದೇಶಿ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಪಿಎಫ್ಐ ಜತೆಗೆ ಹೋಲಿಸಿರುವುದು ಖಂಡನೀಯ. ಈ ಮೂಲಕ ಕಾಂಗ್ರೆಸ್ ದುಸ್ಸಾಹಸ ಮೆರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಕಷ್ಟ. ಆ ಪಕ್ಷದ ಪ್ರಣಾಳಿಕೆ ಸಂಪೂರ್ಣ ಸುಳ್ಳಿನ ಕಂತೆಯಾಗಿದೆ. ಆಕಾಶ ಮತ್ತು ಪಾತಾಳಕ್ಕೆ ಸಂಪರ್ಕ ಮಾಡುವ ಕನಸು ಕಾಣುತ್ತಿದ್ದು, ಅದು ಕನಸಾಗಿಯೇ ಉಳಿಯಲಿದೆ. ಈ ಪ್ರಣಾಳಿಕೆ ಕಾಂಗ್ರೆಸ್ನದ್ದೋ ಅಥವಾ ಮುಸ್ಲಿಂ ಲೀಗ್ನದ್ದೋ ಎಂಬುದು ತಿಳಿಯದಾಗಿದೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಸುದೀರ್ಘ ಅವಧಿಯವರೆಗೆ ಆಡಳಿತ ನಡೆಸಿದ ಕಾಂಗ್ರೆಸ್, ತನ್ನ ಅಧಿಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬುದು ಈ ಪ್ರಣಾಳಿಕೆಯಿಂದ ಸಾಬೀತಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಇದುವರೆಗೆ ಯಾವುದೇ ಭರವಸೆ ಈಡೇರಿಸಿಲ್ಲ. ಕರ್ನಾಟಕದಲ್ಲಿಯೂ ಇದೇ ಸ್ಥಿತಿ ತಲೆದೋರಲಿದೆ. ಕಾಂಗ್ರೆಸ್ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಟೀಕಿಸಿದರು.
ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಕಾಂಗ್ರೆಸ್ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿಯ ಭರವಸೆ ನೀಡುವ ಮೂಲಕ ಸುಪ್ರೀಂ ತೀರ್ಪನ್ನು ಉಲ್ಲಂಘಿಸಿದೆ ಎಂದು ದೂರಿದರು.
ಲೋಕಾಯುಕ್ತ ಬಲಪಡಿಸುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ. ಆದರೆ, ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದೇ ಕಾಂಗ್ರೆಸ್ ಎಂಬುದನ್ನು ಜನರು ಮರೆತಿಲ್ಲ. ಕಾಂಗ್ರೆಸ್ನದ್ದು ಒಂದೇ ಗ್ಯಾರಂಟಿ, ಅದು ಸೋಲಿನ ಗ್ಯಾರಂಟಿ ಎಂದು ಟೀಕಿಸಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಪ್ರಮುಖರಾದ ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಪ್ರಶಾಂತ ಹಾವಣಗಿ, ಲಕ್ಷ್ಮೀಕಾಂತ ಘೋಡಕೆ ಇತರರು ಉಪಸ್ಥಿತರಿದ್ದರು.