ಜಿಲ್ಲೆ

ಮತ್ತೊಮ್ಮೆ ದೇಶ ವಿಭಜನೆ ತಡೆಯಲು ಏಕರೂಪ ನಾಗರಿಕ ಸಂಹಿತೆ ಅವಶ್ಯಕ: ಜೆ.ನಂದಕುಮಾರ್ ಅಭಿಮತ

ಮೈಸೂರು: ದೇಶ ಮತ್ತೊಮ್ಮೆ ವಿಭಜನೆ ಆಗಬಾರದು ಎನ್ನುವುದಾದರೆ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆಯ ಅವಶ್ಯಕತೆ ಇದೆ ಎಂದು ಪ್ರಜ್ಞಾ ಪ್ರವಾಹ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಜೆ.ನಂದಕುಮಾರ್ ಅಭಿಪ್ರಾಯಪಟ್ಟರು.
ನಗರದ ಜೆ.ಎಲ್.ಬಿ ರಸ್ತೆಯಲ್ಲಿನ ರೋಟರಿ ಸಭಾಂಗಣದಲ್ಲಿ ಸೋಮವಾರ ಪ್ರಜ್ಞಾ ಪ್ರವಾಹ ಸಂಘಟನೆಯಿಂದ ಆಯೋಜಿಸಿದ್ದ ‘ಏಕರೂಪ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಏಕೆ ಅವಶ್ಯಕ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸೋದರತ್ವ, ಸಹಬಾಳ್ವೆಯ ಸಂಕೇತವಾಗಿರುವ ಹಿಂದುತ್ವವನ್ನು ಅನೇಕ ಮುಸ್ಲಿಮರು ಒಪ್ಪಿ ನಮ್ಮೊಂದಿಗೆ ಇದ್ದಾರೆ. ಆದರೆ ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಇದನ್ನು ಬಂಡವಾಳ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಈ ಮೂಲಕ ದೇಶವನ್ನು ಮತ್ತೊಮ್ಮೆ ವಿಭಜನೆ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಇದನ್ನು ತಡೆಯಬೇಕಾದರೆ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಕೂಡ ಸಂವಿಧಾನ ರಚನಾ ಸಭೆಯಲ್ಲಿಯೇ ಏಕರೂಪ ನಾಗರಿಕತೆ ಜಾರಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ಮುಸ್ಲಿಂ ಮಹಿಳೆಯರು ಕೆಲವು ಮುಸ್ಲಿಂ ನಾಯಕರೂ ಕೂಡ ತ್ರಿವಳಿ ತಲಾಕ್ ವಿಚಾರದಲ್ಲಿ ನಡೆದ ಚರ್ಚೆ ವೇಳೆ ಏಕರೂಪ ಸಂಹಿತೆ ಬಗ್ಗೆ ಧ್ವನಿ ಎತ್ತಿದ್ದಾರೆ. ಹಾಗಾಗಿ ದೇಶದ ಜನರು ಏಕರೂಪ ನಾಗರಿಕ ಸಂಹಿತೆ ಬಯಸುತ್ತಿದ್ದಾರೆ ಎಂದರು.
ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಸಾರುವ ಹಿಂದುತ್ವದ ಆಶಯವೂ ನಾಗರಿಕ ಸಂಹಿತೆ ಅನುಷ್ಠಾನದಿಂದ ಬಲಗೊಳ್ಳಲಿದೆ. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಆರ್ಟಿಕಲ್ 44 ಕೂಡ ಸಂಹಿತೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂಬ ಸಲಹೆ ನೀಡುತ್ತದೆ. ಏಕೆ ಈ ಸಲಹೆ ನೀಡಿತು? ಇದಕ್ಕೆ ಕಾರಣ 1937ರಲ್ಲಿ ಜಾರಿಗೆ ಬಂದ ಶರಿಯಾ ಕಾಯ್ದೆ ಮತ್ತು ಅದು ಸೃಷ್ಟಿಸಿದ್ದ ವಿಭಜನೆ ಎಂದರು.
ಬಂಗಾಳ ವಿಭಜನೆಯಲ್ಲಿ ದೇಶದ ಹಿಂದು ಮತ್ತು ಮುಸ್ಲಿಮರ ಒಗ್ಗಟ್ಟನ್ನು ಬ್ರಿಟಿಷರು ಕಂಡಿದ್ದರು. ಮುಸ್ಲಿಂ ಲೀಗ್ ಬೆಳೆಸಿ, ಕಮ್ಯುನಿಷ್ಟೀಕರಣ ಮಾಡಲು ಕಾಂಗ್ರೆಸ್‌ನ ನೆಹರೂ ಎಲ್ಲ ಅವಕಾಶವನ್ನು ಬಳಸಿಕೊಂಡರು ಎಂದು ದೂರಿದರು.
ಈಗ ಮತ್ತೆ ಮುಸ್ಲಿಮರ ತುಷ್ಠೀಕರಣ ನಡೆಯುತ್ತಿದ್ದು, ಇದರಿಂದ ದೇಶ ಮತ್ತೆ ವಿಭಜನೆ ಮಾಡುವ ಹುನ್ನಾರ ನಡೆಯುತ್ತಿದೆ. ಆದರೆ ಭಾರತೀಯರು ಅದಕ್ಕೆ ಅಸ್ಪದ ನೀಡದೆ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ಸಂಹಿತೆಯನ್ನು ಒಪ್ಪಿಕೊಳ್ಳಬೇಕು ಎಂದು ಕೋರಿದರು.
ಶರಿಯಾ ಕಾಯ್ದೆ ಬರುವ ಮೊದಲು ಭಾರತದ ಮುಸ್ಲಿಮರೂ ಹಿಂದೂ ಕಾನೂನುಗಳನ್ನೆ ಅನುಸರಿಸುತ್ತಿದ್ದರು, ಕಾನೂನು ಧರ್ಮ ಭಾಗವೂ ಆಗಿರಲಿಲ್ಲ. ಈಗಿನ ಮುಸ್ಲಿಂ ದೇಶಗಳಲ್ಲೂ ಎರಡು ವೈಯಕ್ತಿಕ ಕಾನೂನುಗಳಿಲ್ಲ. ಆದರೆ ಭಾರತದಲ್ಲಿ ಮತಬ್ಯಾಂಕ್‌ಗಾಗಿ ಎರಡು ಕಾನೂನು ಅನುಸರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಹಸಂಚಾಲಕರಾದ ರಘುನಂದನ್, ಶ್ರೀಕಾಂತ್ ಕಟ್ದರೆ, ಮೈಸೂರು ವಿಭಾಗದ ಸಂಚಾಲಕ ಡಾ.ಹನುಮಂತಾಚಾರ್ ಜೋಶಿ, ಮೈಸೂರು ರೋಟರಿ ಅಧ್ಯಕ್ಷ ಅರುಣ್ ಬೆಳವಾಡಿ ಇದ್ದರು.