ಚಿತ್ರದುರ್ಗ: ಚಿತ್ರದುರ್ಗ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮತ್ತೊಂದು ವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಬೆಂಗಳೂರಿನ ಹವಮಾನ ಕೇಂದ್ರ ಮಾಹಿತಿ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಅ. 28ರವರೆಗೂ ಏಳು ದಿನ ಮಳೆ ಮುಂದುವರಿಯಲಿದೆ.
ಬುಧವಾರ ಉತ್ತರ ಕನ್ನಡ, ಉಡುಪಿ, ಧಾರವಾಡ, ಬೆಳಗಾವಿ, ಹಾವೇರಿ, ಮಂಡ್ಯ, ಮೈಸೂರು, ಹಾಸನ, ಕೊಡಗು, ರಾಮನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರೀ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.
24ರಂದು ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಸೇರಿ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29-30 ಡಿಗ್ರಿ ಸೆಲ್ಸಿಯಸ್ ಮತ್ತು 20ಡಿಗ್ರಿ ಸೆಲ್ಸಿಯಸ್ ಇರಲಿದೆ.
ಚಂಡಮಾರುತವೂ ಮಂಗಳವಾರ ಪರದೀಪ್ ಒಡಿಶಾದ ಆಗ್ನೇಯಕ್ಕೆ 700 ಕಿ.ಮೀ, ಸಾಗರ್ ದ್ವೀಪದ ಪಶ್ಚಿಮ ಬಂಗಾಳ ಆಗ್ನೇಯಕ್ಕೆ 750 ಕಿ.ಮೀ, ಖೇಪುಪಾರಾ ಬಾಂಗ್ಲಾದೇಶದ ಆಗ್ನೇಯಕ್ಕೆ 730 ಕಿ.ಮೀವರೆಗೂ ಪಶ್ಚಿಮ-ವಾಯುವ್ಯದ ಕಡೆ ಚಲಿಸಿದೆ.
23ರಂದು ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಸೈಕ್ಲೋನಿಕ್ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಆನಂತರ ವಾಯುವ್ಯಕ್ಕೆ ಚಲಿಸಿ, 24ಕ್ಕೆ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಮಾಹಿತಿ ನೀಡಿದೆ.
25ಕ್ಕೆ ಪುರಿ ಮತ್ತು ಸಾಗರ್ ದ್ವೀಪದ ನಡುವೆ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ತೀವ್ರ ಸೈಕ್ಲೋನಿಕ್ ಚಂಡಮಾರುತವೂ ಪ್ರತಿ ಗಂಟೆಗೆ 100ರಿಂದ 120 ಕಿ.ಮೀ ಗಾಳಿಯ ವೇಗದೊಂದಿಗೆ ಚಲಿಸಲಿದೆ ಎಂದೂ ತಿಳಿಸಿದೆ.