ಜಿಲ್ಲೆ

ಮತ್ತೊಂದು ವರದಿಯೂ ನೆಗೆಟಿವ್

ಧಾರವಾಡ: ನಗರದಲ್ಲಿ ಕರೊನಾ ವೈರಸ್ ಶಂಕಿತ ವ್ಯಕ್ತಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಬಾಕಿ ಇರುವ ಎಲ್ಲ ವರದಿಗಳು ನೆಗೆಟಿವ್ ಬಂದ ಪರಿಣಾಮ ಜನರು ನಿಟ್ಟುಸಿರು ಬಿಡುವಂತಾಗಿದೆ.

ಆಸ್ಟ್ರೇಲಿಯಾದಿಂದ ದುಬೈ ಮಾರ್ಗವಾಗಿ ಬಂದಿರುವ ಧಾರವಾಡ ಹೊಸ ಯಲ್ಲಾಪುರದ ಒಬ್ಬ ವ್ಯಕ್ತಿಗೆ ಮಾತ್ರ ಕರೊನಾ ದೃಢಪಟ್ಟಿದ್ದು, ಹುಬ್ಬಳ್ಳಿ ಕಿಮ್ಸ್​ನಲ್ಲಿ ಚಿಕಿತ್ಸೆ ನಡೆದಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 38 ಜನರ ಗಂಟಲು ದ್ರವ ಮಾದರಿಯನ್ನು ಶಿವಮೊಗ್ಗದ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 37 ವರದಿಗಳು ನೆಗೆಟಿವ್ ಬಂದಿದ್ದು, ಒಂದು ಪಾಸಿಟಿವ್ ಬಂದಿದೆ. ಮಂಗಳವಾರದವರೆಗೆ ಇದ್ದ 10 ಶಂಕಿತರ ಸಂಖ್ಯೆ ಬುಧವಾರ 38ಕ್ಕೆ ಏರಿಕೆಯಾಗಿದ್ದಲ್ಲದೆ, 5 ಜನರ ವರದಿ ಬರುವುದು ಬಾಕಿ ಇದ್ದ ಕಾರಣಕ್ಕೆ ಆತಂಕ ಮನೆ ಮಾಡಿತ್ತು. ಗುರುವಾರ ಎಲ್ಲ ವರದಿಗಳೂ ನೆಗೆಟಿವ್ ಬಂದಿದೆ. ಶಂಕಿತರ ಸಂಖ್ಯೆಯಲ್ಲಿ ಸಹ ಏರಿಕೆಯಾಗದಿರುವುದು ಇನ್ನೊಂದು ಸಮಾಧಾನದ ಸಂಗತಿಯಾಗಿದೆ.

ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 459 ಜನರ ಮೇಲೆ ನಿಗಾ ಇಟ್ಟಿದೆ. ಇವರೆಲ್ಲರ ಮೇಲೆ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು, ಈ ಪೈಕಿ 260 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ಗೆ ಒಬ್ಬರು ದಾಖಲಾಗಿದ್ದಾರೆ. 184 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 14 ಜನರು 28 ದಿನಗಳ ಪ್ರತ್ಯೇಕ ವಾಸವನ್ನು ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿಯಲ್ಲಿ ಶೀಘ್ರ ಕರೊನಾ ಪತ್ತೆ ಕೇಂದ್ರ

ಧಾರವಾಡ: ಕರೊನಾ ಸೋಂಕು ಪತ್ತೆ ಪರೀಕ್ಷಾ ಕೇಂದ್ರವನ್ನು ಶೀಘ್ರ ಹುಬ್ಬಳ್ಳಿಯಲ್ಲಿ ಆರಂಭಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ರ್ಸಟ್ ಹೌಸ್​ನಲ್ಲಿ ಕರೊನಾ ಸೋಂಕಿಗೆ ಸಂಬಂಧಿಸಿದಂತೆ ತುರ್ತು ಪರಿಸ್ಥಿತಿ ಎದುರಿಸುವ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಫೀವರ್ ಕ್ಲಿನಿಕ್, ಸೂಪರ್​ವೈಸ್ಡ್ ಕ್ವಾರೆಂಟೖನ್ ಸೆಂಟರ್ ಹಾಗೂ ಕರೊನಾ ಆಸ್ಪತ್ರೆಗಳನ್ನು ಅಗತ್ಯ ಇರುವ ಎಲ್ಲ ಉಪಕರಣಗಳೊಂದಿಗೆ ಸನ್ನದ್ಧವಾಗಿರಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ವಿದೇಶದಿಂದ ಬಂದ 378 ಜನರ ಮೇಲೆ ನಿಗಾ ಇರಿಸಿ ಅವರನ್ನು ಹೊಮ್ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ 133 ಜನ 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಪ್ರತ್ಯೇಕ ವಾಸವನ್ನು ಪೂರ್ಣಗೊಳಿಸಬೇಕಿದೆ. ನಿತ್ಯ ಕರೆ ಮಾಡಿ ಕ್ವಾರೆಂಟೈನ್ ಆದವರ ಆರೋಗ್ಯದ ಸ್ಥಿತಿ ತಿಳಿದುಕೊಳ್ಳಲಾಗುತ್ತಿದೆ ಎಂದರು.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಒಟ್ಟು 14 ಫೀವರ್ ಕ್ಲಿನಿಕ್, 11 ಸೂಪರ್​ವೈಸ್ಡ್ ಕ್ವಾರೆಂಟೖನ್ ಸೆಂಟರ್ ಹಾಗೂ ಕಿಮ್ಸ್ನಲ್ಲಿ ಕರೊನಾ ವಾರ್ಡ್ ತೆರೆಯಲಾಗಿದೆ.

ಕಿಮ್ಸ್​ನ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕರೊನಾ ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. 35 ವೆಂಟಿಲೇಟರ್​ಗಳು ಲಭ್ಯವಿವೆ. ಇತರ ಖಾಸಗಿ ಆಸ್ಪತ್ರೆಗಳಲ್ಲಿ 80 ವೆಂಟಿಲೇಟರ್​ಗಳು ಲಭ್ಯವಿದ್ದು, ಅಗತ್ಯ ಬಿದ್ದರೆ ಅವುಗಳನ್ನು ಸಹ ಪಡೆದು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಎಸ್ಪಿ ವರ್ತಿಕಾ ಕಟಿಯಾರ್, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪವಿಭಾಗಧಿಕಾರಿ ಮಹಮದ್ ಜುಬೇರ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಟಾನಿ, ಡಿಎಚ್​ಒ ಯಶವಂತ ಮದೀನಕರ ಇತರ ಅಧಿಕಾರಿಗಳಿದ್ದರು.