ಬಾಗಲಕೋಟೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಸದ್ಯಕ್ಕಂತೂ ನಿಗೂಢ. ದಿನಕ್ಕೊಂದು ಕ್ಷೇತ್ರದ ಹೆಸರು ಹೊರಬರುತ್ತಲೇ ಇವೆ. ಆ ಬಗ್ಗೆ ಸ್ವಪಕ್ಷ ಮತ್ತು ವಿಪಕ್ಷಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯ ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎನ್ನುವುದು ಚಾಲುಕ್ಯರ ನಾಡಿನ ಅಭಿಮಾನಿಗಳ ಮಹದಾಸೆ.
ಇದಕ್ಕೆ ಪೂರಕ ಎನ್ನುವಂತೆ ಬುಧವಾರ ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಪಾದಯಾತ್ರೆ ಹಾಗೂ ಬಹುರಂಗ ಸಭೆಯಲ್ಲಿ ಈ ಬೇಡಿಕೆ ಪ್ರತಿಧ್ವನಿಸಿತು.
ಹೊಸಗೌಡರ ಕಲ್ಯಾಣ ಮಂಪಟದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಈ ಬೇಡಿಕೆ ಮುಗಿಲು ಮುಟ್ಟುವಂತೆ ಕೂಗು ಪ್ರತಿಧ್ವನಿಸುತ್ತಲೇ ಇತ್ತು. ಒಂದು ಹಂತದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ಒಮ್ಮೆಲೆ ಎದ್ದು ನಿಂತು ಸಾಹೇಬ್ರೆ ನೀವು ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಮತ್ತೆ ಮತ್ತೆ ಕೂಗಲು ಆರಂಭಿಸಿದ್ದರಿಂದ ಸಿದ್ದರಾಮಯ್ಯ ಕೈಮುಗಿದು ಭಾಷಣವನ್ನು ಅಲ್ಲಿಗೆ ನಿಲ್ಲಿಸಿದರು.
ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುತ್ತ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸುವ ವೇಳೆ ಸಾಹೇಬ್ರ ಬಾದಾಮಿ, ಬಾದಾಮಿ ಎನ್ನುವ ಕೂಗು ತೂರಿ ಬಂದಿತು. ಇದಕ್ಕೆ ಧ್ವನಿಗೂಡಿಸಿದ ಮತ್ತೆ ಕೆಲವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿ ಎಂದು ಪಟ್ಟುಹಿಡಿದು ಘೋಷಣೆ ಕೂಗಿದರು. ಸುಮ್ಮನಿರುವಂತೆ ಸಿದ್ದರಾಮಯ್ಯ ಎಷ್ಟೇ ಹೇಳಿದರೂ ಕೇಳಿಸಿಕೊಳ್ಳಲಿಲ್ಲ. ಆಗ ವೇದಿಕೆಯಲ್ಲಿ ಇದ್ದ ಕೆಲ ಅಭಿಮಾನಿಗಳು ಕೈಮುಗಿದು ನಿಲ್ಲುತ್ತೇನೆ ಎಂದು ಹೇಳಿಬಿಡಿ ಎಂದು ಮನವಿ ಮಾಡಿದರು. ಆಗಲೂ ಸಿದ್ದರಾಮಯ್ಯ ಸುಮ್ಮನಿದ್ದಾಗ ಅಭಿಮಾನಿಗಳ ಕೂಗು ಮತ್ತಷ್ಟು ತೀವ್ರಗೊಂಡಿತು. ಆಗ ಸಿದ್ದರಾಮಯ್ಯ ಅವರು, ನಾನು ಈಗ ಬಾದಾಮಿ ಶಾಸಕ, ಬಾದಾಮಿ ಎಂಎಲ್ಎ ಎಂದು ಒತ್ತಿ ಒತ್ತಿ ಹೇಳಿದರು. ಚುನಾವಣೆ ಇನ್ನು ಒಂಭತ್ತು ತಿಂಗಳು ಇದೆ. ಮತ್ತೊಮ್ಮೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಜನರಿಗೆ ಕೈಮುಗಿದು ಭಾಷಣ ಮುಕ್ತಾಯ ಮಾಡಿದರು.
ಬನದ ತಾಯಿಗೆ ವಿಶೇಷ ಪೂಜೆ :ಇನ್ನು ಪಾದಯಾತ್ರೆ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ಅವರು ಶಕ್ತಿದೇವತೆ ಬನಶಂಕರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರು ಮಾಜಿ ಸಿಎಂಗೆ ಹೂಮಾಲೆ ಹಾಕಿ ಗೌರವಿಸಿದರು. ಪಾದಯಾತ್ರೆ ಹಾಗೂ ಬಹಿರಂಗ ಸಭೆಯ ವೇಳೆ ಆಗಾಗ ಜಿಟಿಜಿಟಿ ಮಳೆ ಆಗುತ್ತಿತ್ತು. ಮಳೆಯಲ್ಲಿಯೇ ಕಾರ್ಯಕರ್ತರು ಹೆಜ್ಜೆ ಹಾಕಿದರು.