ಜಿಲ್ಲೆ

ಮತ್ತೆ ಜೆಡಿಎಸ್ ಅಧಿಕಾರಕ್ಕೆ : ಇಬ್ರಾಹಿಂ

reportermys

ಹಾಸನ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು ದೈವಾನುಗ್ರಹದಿಂದ ಎಚ್.ಡಿ. ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವುದು ಶತಸಿದ್ಧ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು.

ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಅವರ 71ನೇ ಜನ್ಮ ದಿನದ ಅಂಗವಾಗಿ ಮಂಗಲವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಸವಿನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಪ್ರವಾಸಿ ಮಂದಿರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ 1994ರಲ್ಲಿ ಇದ್ದ ಪರಿಸ್ಥಿತಿ ಮತ್ತೆ ಉದ್ಭವವಾಗುತ್ತಿದೆ. 2023ಕ್ಕೆ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಂಬರ್ ಒನ್ ಸ್ಥಾನದಲ್ಲಿದ್ದು ಎರಡನೇ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿವೆ. ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂಬ ಮುನ್ಸೂಚನೆ ಅರಿತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ತಳಮಳ ಸೃಷ್ಟಿಯಾಗಿದೆ ಎಂದರು.

ಜೆಡಿಎಸ್ ಪಕ್ಷಕ್ಕೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಾಗುತ್ತಿದೆ. ಜೆಡಿಎಸ್ ಹುಟ್ಟಿಸಿದ ಮಕ್ಕಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಮಕ್ಕಳು ಅಂತ ಹೇಳುತ್ತಿವೆ. ಇಂತಹ ಪರಿಸ್ಥಿತಿ ಆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಂದಿರುವುದು ಜೆಡಿಎಸ್ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಶಕ್ತಿ ಇಲ್ಲ. ಆದ್ದರಿಂದ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಮೊದಲು ಅವರು ತಮ್ಮ ಪಕ್ಷದಲ್ಲಿ ಇರುವಂತಹ ಭಿನ್ನಾಭಿಪ್ರಾಯದ ನಾಯಕರನ್ನು ಒಂದುಗೂಡಿಸುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸಬೇಕಿದೆ ಎಂದು ವ್ಯಂಗ್ಯವಾಡಿದರು.

ಜನರ ಸಮಸ್ಯೆಯನ್ನು ಆಲಿಸಬೇಕಾದ ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಶಾಸಕರು ಡ್ಯಾನ್ಸ್ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದು ಅವರು ಜನರಿಗೆ ಸ್ಪಂದಿಸುತ್ತಿರುವ ರೀತಿ ಎಂದು ಟೀಕಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಾಯಕರನ್ನು ತಯಾರು ಮಾಡುವ ಯಂತ್ರದ ರೀತಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಯಾರು ಮಾಡಿದ್ದು ಯಾರು? ಜೆ.ಎಚ್. ಪಟೇಲ್ ಅವರನ್ನು ರಾಜಕೀಯಕ್ಕೆ ತಂದವರು ಯಾರು ಎಂದು ಪ್ರಶ್ನಿಸಿದರು.

ಕೆಎಂಶಿ ಪಕ್ಷ ಬಿಡಲ್ಲ:

ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಪಕ್ಷ ಬಿಡುವುದಿಲ್ಲ. ಅವರೊಂದಿಗೆ ಮಾತುಕತೆ ನಡೆಸಿ ಅವರ ಅಸಮಾಧಾನ ಬಗೆಹರಿಸುವ ಕೆಲಸ ಮಾಡಲಾಗಿದೆ. ಯಾವ ಶಾಸಕರೂ ಜೆಡಿಎಸ್ ತೊರೆಯುವುದಿಲ್ಲ. ನಮ್ಮ ಪಕ್ಷದಲ್ಲಿ ಸ್ಥಾನಕ್ಕಿಂತ ಮಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.