ಆಲಂದೂರು ಗ್ರಾಮದ ತೋಟದಲ್ಲಿ ಕಾಡಾನೆ ಅಡಕೆ ಮರಗಳನ್ನು ಬೀಳಿಸಿರುವುದು.  
ಜಿಲ್ಲೆ

ಮತ್ತೆ ಒಂಟಿ ಸಲಗದ ಹಾವಳಿ

ಎನ್.ಆರ್.ಪುರ: ಕಡಹಿನಬೈಲು ಗ್ರಾಪಂ ಶೆಟ್ಟಿಕೊಪ್ಪ, ಆಲಂದೂರು ಚೆನ್ನಮಣಿ ಭಾಗಗಳಲ್ಲಿ ಕಾಡಾನೆ ದಾಳಿ ನಡೆಸುತ್ತಿದ್ದು, ಅಡಕೆ, ಬಾಳೆ ಗಿಡಗಳನ್ನು, ಪೈಪ್‌ಲೈನ್‌ಗಳನ್ನು ನಾಶಪಡಿಸುತ್ತಿದೆ. ಆಲಂದೂರಿನ ಸುರೇಶ್ ಎಂಬುವರ ಮನೆ ಸಮೀಪ ಒಂಟಿ ಸಲಗವೊಂದು ಬುಧವಾರ ರಾತ್ರಿ ಬಂದಿದ್ದು ಮನೆಯವರಿಗೆ ಹಾಗೂ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ರಾತ್ರಿ 10 ಗಂಟೆ ಸುಮಾರಿಗೆ ಸುರೇಶ್ ಅವರ ಮನೆ ಎದುರಿನ ತೋಟಕ್ಕೆ ಬಂದ ಒಂಟಿ ಸಲಗ ಬಾಳೆ, ಅಡಕೆ ಗಿಡ ಹಾಗೂ ಪೈಪ್‌ಲೈನ್ ನಾಶ ಮಾಡಿದೆ. ಶಬ್ದ ಕೇಳಿದ ಮನೆಯವರು ಟಾರ್ಚ್ ಬಿಟ್ಟು ನೋಡಿದಾಗ ಒಂಟಿ ಸಲಗ ಬಾಳೆಗಿಡ ತಿನ್ನುತ್ತಿರುವುದು ಕಂಡುಬಂದಿದೆ. ಆನೆ ಇದ್ದ ಜಾಗಕ್ಕೂ ಮನೆಗೂ ಕೇವಲ 50 ಅಡಿ ಅಂತರವಿದೆ. 1 ಗಂಟೆಗೂ ಹೆಚ್ಚು ಕಾಲ ಒಂಟಿ ಸಲಗ ಅದೇ ಜಾಗದಲ್ಲಿ ಬಾಳೆ, ಅಡಕೆಗಿಡಗಳನ್ನು ತಿನ್ನುತ್ತಿತ್ತು. ಕುಟುಂಬಸ್ಥರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಟಾಸ್ಕ್ ಫೋರ್ಸ್ ಸಿಬ್ಬಂದಿ ಆಗಮಿಸಿ ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗೆ ಅಟ್ಟಿದ್ದಾರೆ. ಇದಕ್ಕೂ ಮೊದಲು ಒಂಟಿ ಸಲಗ ಆಲಂದೂರು ಕೆ.ಸಿ.ಮಂಜುನಾಥ್ ಅವರ ತೋಟಕ್ಕೆ ನುಗ್ಗಿ ಅಡಕೆ ಗಿಡವನ್ನು ನಾಶ ಮಾಡಿದೆ.

ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯವರು ಪುಂಡ ಒಂಟಿ ಸಲಗವೊಂದನ್ನು ಇದೇ ಭಾಗದಲ್ಲಿ ಸೆರೆ ಹಿಡಿದು ಸಕ್ರೆಬೈಲಿನ ಆನೆ ಬಿಡಾರಕ್ಕೆ ಕಳಿಸಿದ್ದರು. ಇದರಿಂದ ಒಂಟಿ ಸಲಗದ ಕಾಟ ತಪ್ಪಿದೆ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಮತ್ತೆ ಒಂಟಿ ಸಲಗ ಬಂದಿರುವುದು ಗ್ರಾಮಸ್ಥರನ್ನು ಗಾಬರಿಗೊಳಿಸಿದೆ.