ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇದಿನೆ ಏರುತ್ತ ಸಾಗಿದೆ. ಶನಿವಾರ ಸಂಜೆ ವೇಳೆಗೆ 2 ವರ್ಷದ ಗಂಡು ಮಗು ಸೇರಿ ಒಂದೇ ಕುಟುಂಬದ ನಾಲ್ವರು ಹಾಗೂ 51 ವರ್ಷದ ಪುರುಷನಲ್ಲಿ (ಒಟ್ಟು 5 ಜನ) ಕರೊನಾ ಸೋಂಕು ದೃಢಪಟ್ಟಿದೆ.
ಇವರೆಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿರುವವರು. ಪಿ 1913 (51 ವರ್ಷದ ಪುರುಷ), ಪಿ- 1942 (29 ವರ್ಷದ ಮಹಿಳೆ), ಪಿ- 1943 (58 ವರ್ಷದ ಪುರುಷ), ಪಿ- 1944 (2 ವರ್ಷದ ಗಂಡು ಮಗು), ಪಿ- 1945 (49 ವರ್ಷದ ಮಹಿಳೆ) ಎಂದು ಸೋಂಕು ಪೀಡಿತರನ್ನು ಗುರುತಿಸಲಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಹಿಂದಿರುಗಿದ್ದರು. ಗಂಟಲ ದ್ರವ ಪರೀಕ್ಷೆಗೊಳಪಡಿಸಿ ಅವರನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಈಗಾಗಲೇ 10 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಸಾಂಸ್ಥಿಕ ಕ್ವಾರಂಟೈನ್ ಅವಧಿ ಇಳಿಕೆ
ಧಾರವಾಡ: ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಹೆಚ್ಚು ಪ್ರಕರಣಗಳಿರುವ ರಾಜ್ಯಗಳಿಂದ ಆಗಮಿಸುವ ಜನರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ ನಂತರ 7 ದಿನಗಳ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗುವುದು. ಇತರ ರಾಜ್ಯಗಳಿಂದ ಬರುವ ಜನರನ್ನು ನೇರವಾಗಿ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗುವುದು. ಜಿಲ್ಲೆಯ ಸಾಂಸ್ಥಿಕ ಹಾಗೂ ಹೋಟೆಲ್ ಕ್ವಾರಂಟೈನ್ನಲ್ಲಿ 7 ದಿನಗಳ ಅವಧಿ ಪೂರ್ಣಗೊಳಿಸಿರುವ ವ್ಯಕ್ತಿಗಳನ್ನು ಮತ್ತೊಂದು ಬಾರಿ ಕೋವಿಡ್ ತಪಾಸಣೆಗೊಳಪಡಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಸಾಂಸ್ಥಿಕ ಕ್ವಾರಂಟೈನ್ ಅವಧಿ ಇಳಿಕೆಯಾಗಿದೆ. ಗರ್ಭಿಣಿಯರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸೇರಿ ವೈದ್ಯಕೀಯ ವೃತ್ತಿಪರರು, ರಕ್ಷಣಾ ಪಡೆಗಳ ಸಿಬ್ಬಂದಿಗೆ ಸಾಂಸ್ಥಿಕ ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗಿದೆ. ಈ ಮಾರ್ಗಸೂಚಿಗಳನ್ವಯ ಜಿಲ್ಲೆಗೆ ಮೇ 22ರವರೆಗೆ ಆಗಮಿಸಿರುವ 1,515 ಜನರಲ್ಲಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ, ಕೋವಿಡ್ ನೆಗೆಟಿವ್ ಬಂದಿರುವ ಜನರನ್ನು ಬಿಡುಗಡೆ ಮಾಡಿ ಉಳಿದ 7 ದಿನಗಳ ಹೋಂ ಕ್ವಾರಂಟೈನ್ ಪಾಲನೆಗೆ ಕ್ರಮ ವಹಿಸಬೇಕು ಎಂದರು.
ಖಾಸಗಿ ಆಸ್ಪತ್ರೆ, ಔಷಧ ಅಂಗಡಿಗಳ ವರದಿ ಆಧಾರದಲ್ಲಿ ಲಭ್ಯವಾಗುತ್ತಿರುವ ನೆಗಡಿ, ಕೆಮ್ಮು, ಜ್ವರ, ತೀವ್ರ ಉಸಿರಾಟದ ತೊಂದರೆ ಉಳ್ಳ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಿ ಹೆಲ್ತ್ ವಾಚ್ ಆಪ್ಗೆ ಅಳವಡಿಸಬೇಕು. ಆರೋಗ್ಯ ಸೇತು ಆಪ್ನಲ್ಲಿ ದಾಖಲಾಗುವ ರೋಗಲಕ್ಷಣ ಇರುವ ವ್ಯಕ್ತಿಗಳನ್ನು ಗುರುತಿಸಿ ಪರೀಕ್ಷಿಸಬೇಕು ಎಂದು ಸೂಚಿಸಿದರು.
ಜಿ.ಪಂ. ಸಿಇ ಡಾ. ಬಿ.ಸಿ. ಸತೀಶ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಕಿಮ್ಸ್ನ ಡಾ. ಲಕ್ಷ್ಮೀಕಾಂತ ಲೋಕರೆ, ಇತರರಿದ್ದರು.
ಕೋವಿಡ್ನಿಂದ ಗುಣಮುಖ
ಕೋವಿಡ್ನಿಂದ ಗುಣಮುಖರಾದ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್ನಿಂದ ಶನಿವಾರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಮೇ 1ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರದ ಪಿ- 589 (57 ವರ್ಷದ ಪುರುಷ) ಸಂಪೂರ್ಣ ಗುಣಮುಖರಾಗಿದ್ದಾರೆ. 24 ಗಂಟೆಗಳ ಅಂತರದಲ್ಲಿ 2 ಬಾರಿ ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ವರದಿ ನೆಗೆಟಿವ್ ಬಂದಿದೆ. ಎಕ್ಸ್ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದರಿಂದ ಬಿಡುಗಡೆ ಮಾಡಲಾಗಿದೆ.
ವೈದ್ಯರ ತಂಡಕ್ಕೆ ಕೃತಜ್ಞತೆ
ಕೋವಿಡ್ ದೃಢಪಟ್ಟ ನಂತರ ಮುನ್ನೆಚ್ಚರಿಕೆ ಮತ್ತು ಕಾಳಜಿ ತೋರಿದ ಜಿಲ್ಲಾಡಳಿತ, ಕಿಮ್್ಸ ವೈದ್ಯರು, ನರ್ಸ್ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಪಿ- 589 ಕೃತಜ್ಞತೆ ಸಲ್ಲಿಸಿದರು. ಅವರಿಗೆ ಕಿಮ್್ಸ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ, ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಡಾ. ಮಹೇಶ, ವಾರ್ಡ್ ನರ್ಸ್ ಎನಾಪಾಲ್, ಇತರರಿದ್ದರು.
ಮದ್ಯ ಮಾರಾಟ ನಿಷೇಧ
ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 23ರ ಸಂಜೆ 7 ಗಂಟೆಯಿಂದ ಮೇ 25ರ ಬೆಳಗ್ಗೆ 7ರವರೆಗೆ ಜಿಲ್ಲಾದ್ಯಂತ ಮದ್ಯ ಉತ್ಪಾದನೆ, ಮದ್ಯ ಸಾಗಾಟ ಮತ್ತು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
437 ಶಂಕಿತರು ಪತ್ತೆ
ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 437 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶುಕ್ರವಾರ ಇದ್ದ 12,044 ನಿಗಾವಹಿಸಿದವರ ಸಂಖ್ಯೆ ಶನಿವಾರ 12,500ಕ್ಕೆ ಏರಿಕೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ 11,813 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 10,903 ಜನರ ವರದಿ ನೆಗೆಟಿವ್ ಬಂದಿವೆ. 38 ಪ್ರಕರಣಗಳು ಪಾಸಿಟಿವ್ ಬಂದಿದ್ದು, 10 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 882 ವರದಿಗಳು ಬರಬೇಕಿದೆ. ಶುಕ್ರವಾರ ಬಾಕಿ ಇದ್ದ 995 ವರದಿಗಳ ಪೈಕಿ 113 ವರದಿಗಳು ನೆಗೆಟಿವ್ ಬಂದಿವೆ.