ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ವ್ಯಾಪಿಸತೊಡಗಿದ್ದು, ಬುಧವಾರ ಮತ್ತೆ 6 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಗದಗ ತಾಲೂಕಿನ ಹೊಂಬಳ ಗ್ರಾಮದ ಪಿ-9403 ಸೋಂಕಿತರ ಸಂಪರ್ಕದಿಂದ 10, 11 ಹಾಗೂ 14 ವರ್ಷದ ಬಾಲಕರಿಗೆ ಸೋಂಕು ತಗುಲಿದೆ. ನರಗುಂದ ತಾಲೂಕಿನ ಮೊರಬದಿಂದ ಮದುವೆಗೆಂದು ಆಗಮಿಸಿದ್ದ ದಂಪತಿಯ ಸಂಪರ್ಕದಿಂದ ಬಾಲಕರಿಗೆ ಸೋಂಕು ತಗುಲಿದೆ. ಗದಗ ನಗರದ ಡಂಬಳ ನಾಕಾ ಬಳಿಯ ಸಿದ್ಧರಾಮೇಶ್ವರ ನಗರದ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಈ ಸೋಂಕಿತ ವ್ಯಕ್ತಿ ಬಾಗಲಕೋಟೆ ಜಿಲ್ಲಾ ಪ್ರಯಾಣದಿಂದ ಹಾಗೂ ನರಗುಂದ ಪಟ್ಟಣದ 28 ವರ್ಷದ ಮಹಿಳೆಗೆ ಧಾರವಾಡ ಜಿಲ್ಲಾ ಪ್ರಯಾಣದಿಂದ ಸೋಂಕು ದೃಢಪಟ್ಟಿದೆ.
ಮುಂಡರಗಿ ಪಟ್ಟಣದ 75 ವರ್ಷದ ವೃದ್ಧನಿಗೆ ಉಸಿರಾಟದ ತೊಂದರೆಯಿಂದ ಸೋಂಕು ತಗುಲಿದೆ. ಸೋಂಕಿತರಿಗೆ ಜಿಮ್ಸ್ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 94 ಜನರಿಗೆ ಸೋಂಕು ದೃಢಪಟ್ಟಿದೆ. ಅವುಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 44 ಜನ ಗುಣವಾಗಿದ್ದು, 48 ಸಕ್ರಿಯ ಪ್ರಕರಣಗಳಿವೆ.
ಮುಂಡರಗಿಗೆ ಕಾಲಿಟ್ಟ ಮಹಾಮಾರಿ
ಮುಂಡರಗಿ: ಕರೊನಾ ಮಹಾಮಾರಿ ಮುಂಡರಗಿ ಪಟ್ಟಣಕ್ಕೂ ಕಾಲಿಟ್ಟಿದ್ದು, ಸ್ಥಳೀಯ ಬನಶಂಕರಿ ಓಣಿಯ 75 ವರ್ಷದ ವೃದ್ಧನಿಗೆ ಬುಧವಾರ ಕರೊನಾ ಸೋಂಕು ದೃಢಪಟ್ಟಿದೆ. ಮುಂಜಾಗ್ರತೆ ಕ್ರಮವಾಗಿ ಅವರು ವಾಸಿಸುತ್ತಿದ್ದ ಪ್ರದೇಶವನ್ನು ತಾಲೂಕು ಆಡಳಿತ ಸೀಲ್ಡೌನ್ ಮಾಡಿದೆ.
ವೃದ್ಧನಿಗೆ ಕರೊನಾ ಸೋಂಕು ಹೇಗೆ ಬಂದಿದೆ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಂಜಾಗ್ರತೆ ಕ್ರಮವಾಗಿ ಓಣಿಯ ರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಟ್ಟಣದ ಆರೋಗ್ಯ ಇಲಾಖೆ ನೌಕರನಿಗೆ ಕರೊನಾ ಸೋಂಕು ಬಂದಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಬುಧವಾರ ಮುಂಡರಗಿ ಮತ್ತು ಡಂಬಳ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆ ನೌಕರ ಕಾರ್ಯನಿರ್ವಹಿಸುತ್ತಿದ್ದ ಡಂಬಳ ಗ್ರಾಮದ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ.
ಬನಶಂಕರಿ ಓಣಿಯ ವೃದ್ಧನಿಗೆ ಸಂಪರ್ಕದಲ್ಲಿದ್ದ 12 ಜನರ ಪೈಕಿ ಐವರನ್ನು ಪರೀಕ್ಷೆಗೆ ಒಳಪಡಿಸಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿದವರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ವೈದ್ಯಾಧಿಕಾರಿ ಡಾ. ಬಸವರಾಜ ಕೆ. ತಿಳಿಸಿದ್ದಾರೆ.
ವೃದ್ಧನಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬನಶಂಕರಿ ಓಣಿಯನ್ನು ಸೀಲ್ಡೌನ್ ಮಾಡಲಾಗಿದೆ. ಸ್ಥಳದಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.| ಜೆ.ಬಿ. ಜಕ್ಕನಗೌಡರ ಪ್ರಭಾರಿ ತಹಸೀಲ್ದಾರ್
ಬಂಡಾಯದ ನಾಡಿಗೂ ಕರೊನಾ ಎಂಟ್ರಿ
ನರಗುಂದ: ಪಟ್ಟಣದ ಬಿಎಸ್ಎಫ್ ಯೋಧನ ಪತ್ನಿಗೆ ಕರೊನಾ ಸೋಂಕು ತಗುಲಿದ್ದು, ಈ ಮೂಲಕ ಬಂಡಾಯದ ನಾಡು ನರಗುಂದಕ್ಕೂ ಕರೊನಾ ಲಗ್ಗೆ ಇಟ್ಟಿದೆ.
ಪಟ್ಟಣದ ಸಿದ್ದನಭಾವಿ ಬಡಾವಣೆ ನಿವಾಸಿ 28 ವರ್ಷದ ಮಹಿಳೆ ಲಾಕ್ಡೌನ್ಗೂ ಮೂರು ತಿಂಗಳ ಮುಂಚೆಯೇ ಆಂಧ್ರ ಪ್ರದೇಶದ ನಂದ್ಯಾಲಕ್ಕೆ ಬ್ಯಾಂಕಿಂಗ್ ಕೋಚಿಂಗ್ಗೆ ತೆರಳಿದ್ದರು. ಲಾಕ್ಡೌನ್ ಜಾರಿಯಾದ ಮೊದಲ ವಾರದಲ್ಲಿ ನರಗುಂದಕ್ಕೆ ಆಗಮಿಸಿದ್ದರು. ಮೇ 2ರಂದು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದಾಗ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ವಾರದ ಹಿಂದೆ ಟಿಬಿ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಧಾರವಾಡದ
ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದ ಬಳಿಕ ಅಲ್ಲಿನ ವೈದ್ಯರು ನಿಮ್ಮ ಜಿಲ್ಲೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.
ಜೂ. 22ರಂದು ಗದಗ ಜಿಮ್್ಸ ಆಸ್ಪತ್ರೆಗೆ ಆಗಮಿಸಿದಾಗ ಅಲ್ಲಿನ ವೈದ್ಯರು ತಪಾಸಣೆ ಮಾಡಿ ಗಂಟಲ ದ್ರವದ ಮಾದರಿಯನ್ನು ಪಡೆದು ನರಗುಂದಕ್ಕೆ ಕಳುಹಿಸಿಕೊಟ್ಟಿದ್ದರು. ಜೂ. 24ರಂದು ಸೋಂಕು ದೃಢಪಟ್ಟಿದೆ ಎಂದು ವರದಿ ಬಂದಿದೆ. ಸೋಂಕಿತ ಮಹಿಳೆಯನ್ನು ಗದಗ ಜಿಮ್್ಸ ಆಸ್ಪತ್ರೆಯ ಕೋವಿಡ್ 19 ಕೇಂದ್ರಕ್ಕೆ ದಾಖಲಿಸಲಾಗಿದೆ.
ತಾಲೂಕಾಡಳಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರನ್ನು ಬೆನಕನಕೊಪ್ಪದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದೆ. ಸಿದ್ದನಬಾವಿ ಬಡಾವಣೆಯಲ್ಲಿರುವ ಸೋಂಕಿತ ಮಹಿಳೆಯ ಮನೆ ಸುತ್ತಲಿನ 100 ಮೀ. ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಕರೊನಾ ನಿಯಂತ್ರಣಕ್ಕಾಗಿ ಪುರಸಭೆಯಿಂದ ಔಷಧ ಸಿಂಪಡಣೆ ಮಾಡಲಾಗಿದೆ.
ಸಂತೆ ರದ್ದು: ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದರಿಂದ ನರಗುಂದದಲ್ಲಿ ಬುಧವಾರ ನಡೆಯಬೇಕಿದ್ದ ಸಂತೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ರದ್ದುಪಡಿಸಲಾಗಿತ್ತು.
ಪೊಲೀಸ್ ಠಾಣೆಗಿಲ್ಲ ಪ್ರವೇಶ: ನರಗುಂದ ತಾಲೂಕಿನಲ್ಲಿ ಇತ್ತೀಚಿನ ಒಂದು ವಾರದ ಅವಧಿಯಲ್ಲಿ ಕರೊನಾ ಹಾವಳಿ ಹೆಚ್ಚಾಗತೊಡಗಿದೆ. ಇದರಿಂದ ನರಗುಂದ ಪೊಲೀಸರಿಗೂ ವೈರಸ್ ಹರಡುವ ಭಯ ಶುರುವಾಗಿದೆ. ಹೀಗಾಗಿ ಸಾರ್ವಜನಿಕರು ವಿನಾಕಾರಣ ಪೊಲೀಸ್ ಠಾಣೆಗೆ ಆಗಮಿಸುವುದನ್ನು ನಿಷೇಧಿಸಿ ಠಾಣೆಯ ಪ್ರವೇಶ ದ್ವಾರಕ್ಕೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.