ಕೊಡೇಕಲ್: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಮೃದ್ಧವಾಗಿ ಬೆಳೆದು ರಾಶಿ ಹಂತಕ್ಕೆ ಬಂದಿರುವ ಸಜ್ಜೆ ಬೆಳೆಗೆ ಆಗಾಗ ಸುರಿಯುತ್ತಿರುವ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ರೈತರು ಚಿಂತೆಗೀಡಾಗುವAತೆ ಮಾಡಿದೆ.
ವಲಯದ ತೀರ್ಥ, ಜೋಗುಂಡಬಾವಿ, ಬರದೇವನಾಳ, ಬೂದಿಹಾಳ, ಮಾರನಾಳ, ಮದಲಿಂಗನಾಳ ಸೇರಿ ಇತರೆ ಗ್ರಾಮಗಳಲ್ಲಿ ರೈತರು ಸಜ್ಜೆ ಬೆಳೆದಿದ್ದಾರೆ. ಆದರೆ ವಲಯದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಜ್ಜೆಗೆ ಮಾರಕವಾಗಿ ಪರಿಣಮಿಸಿದೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರಿಗೆ ಮುಖ್ಯ ಬೆಳೆಯಾಗಿರುವ ಸಜ್ಜೆ ಮುಂಗಾರು ಮತ್ತು ಹಿಂಗಾರು ಎರಡು ಹಂಗಾಮಿನಲ್ಲಿ ಬೆಳೆಯಬಹುದಾದ ಕಾರಣ ನೀರಾವರಿ ಆಶ್ರಿತ ಬಹುತೇಕ ರೈತರು ತೊಗರಿ ಮತ್ತು ಸಜ್ಜೆ ಬೆಳೆಯುವ ಮೂಲಕ ತಮ್ಮ ಆಹಾರ ಮತ್ತು ಜಾನುವಾರುಗಳಿಗೆ ಮೇವು ಕೂಡ ಪಡೆದುಕೊಳ್ಳುತ್ತಾರೆ.
ಜೋಳಕ್ಕಿಂತ ಕಡಿಮೆ ಬೆಲೆ ಹೊಂದಿರುವ ಸಜ್ಜೆಗೆ ಕಳೆದ ಎರಡು ಮೂರು ವರ್ಷದಿಂದ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತಿರುವುದು ಸಜ್ಜೆ ಬೆಳೆಗಾರರಿಗೆ ವರದಾನವಾಗಿದೆ. ಪ್ರಸಕ್ತ ವರ್ಷ ವಲಯದಲ್ಲಿ ೧೪೦೦ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬಿತ್ತನೆ ಮಾಡಲಾಗಿದೆ.
ಇದೀಗ ಸುರಿಯುತ್ತಿರುವ ಮಳೆ ಸಜ್ಜೆ ಕಟಾವಿಗೆ ತೊಂದರೆ ಉಂಟು ಮಾಡಿದೆ. ಮಳೆಯ ಹೊಡೆತಕ್ಕೆ ಸಿಲುಕಿದರೆ ಸಮೃದ್ಧವಾಗಿ ಬೆಳೆದ ಸಜ್ಜೆಗೆ ಹಾನಿಯಾಗಿವುದು ಗ್ಯಾಂಟಿಯಾಗಿದ್ದರಿAದ ರೈತರರಲ್ಲಿ ಭೀತಿ ಆವರಿಸಿದೆ. ಕಟಾವು ಆಗದ ಸಜ್ಜೆ ತೆನೆಗಳಲ್ಲಿ ಮಳೆ ನೀರು ಸೇರಿ ಕಾಳು ಕಪ್ಪಾಗುವ ಆಂತಕ ಕೂಡ ಎದುರಾಗಿದೆ. ಕಟಾವು ಮಾಡಿ ಗುಡ್ಡೆ ಹಾಕಿದ ಸಜ್ಜೆಯಲ್ಲಿ ಮೊಳಕೆಯೊಡೆಯುತ್ತಿವೆ. ಇನ್ನೂ ಕೆಲವೊಂದು ಕಡೆ ಮೂಗ್ಗು ವಾಸನೆ ಕೂಡಿದೆ. ಹೀಗಾಗಿ ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗುತ್ತದೆ ಎಂಬ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಮುಂಗಾರಿನಲ್ಲಿ ಬೆಳೆದ ಸಜ್ಜೆ ಉತ್ತಮ ಇಳುವರಿ ಪಡೆಯಲು ರೈತರು ತರಾತುರಿಯಿಂದ ರಾಶಿ ಮಾಡಲು ಮುಂದಾಗಿದ್ದರೂ ಮಳೆ ಮಾತ್ರ ಅವರನ್ನು ಬಿಡುತ್ತಿಲ್ಲ.