ವಿಜಯವಾಣಿ ಸುದ್ದಿಜಾಲ ಕಾರವಾರ/ಅಂಕೋಲಾ
ಜಿಲ್ಲೆಯಲ್ಲಿ ಮತ್ತಿಬ್ಬರಲ್ಲಿ ಕರೊನಾ ಇರುವುದು ಖಚಿತವಾಗಿದೆ. ಮುಂಬೈನಿಂದ ಬಂದು ಹೊನ್ನಾವರದಲ್ಲಿ ಕ್ವಾರಂಟೈನ್ನಲ್ಲಿದ್ದ 32 ವರ್ಷದ ಮಹಿಳೆಗೆ ಕೋವಿಡ್- 19 ದೃಢಪಟ್ಟಿದೆ. ಆಕೆಯ 2 ವರ್ಷದ ಪುತ್ರಿ ಹಾಗೂ ಪತಿಗೆ ಕರೊನಾ ದೃಢಪಟ್ಟಿದ್ದರಿಂದ ನಿನ್ನೆಯಷ್ಟೇ ಕಾರವಾರ ಕ್ರಿಮ್್ಸ ವಾರ್ಡ್ ಸೇರಿದ್ದರು.
ಇನ್ನು ಆಂಧ್ರಪ್ರದೇಶದಿಂದ ವಾಪಸಾಗಿದ್ದ ಭಟ್ಕಳ ಮುಗ್ದುಂ ಕಾಲನಿಯ 38 ವರ್ಷದ ವ್ಯಕ್ತಿಗೂ ಸೋಂಕು ಖಚಿತವಾಗಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 175 ಕ್ಕೆ ತಲುಪಿದೆ. ಅದರಲ್ಲಿ 35 ಸಕ್ರಿಯ ಪ್ರಕರಣಗಳಿವೆ.
6 ಜನರ ಬಿಡುಗಡೆ: ಕರೊನಾ ಮುಕ್ತವಾಗಿರುವ 6 ಜನರನ್ನು ಕಾರವಾರ ಕ್ರಿಮ್್ಸ ಕೋವಿಡ್-19 ವಾರ್ಡ್ನಿಂದ ಶನಿವಾರ ಬಿಡುಗಡೆ ಮಾಡಲಾಯಿತು. ಕಾರವಾರ ಸದಾಶಿವಗಡದ ವೃದ್ಧ ದಂಪತಿ, ಜೊಯಿಡಾದ 19 ವರ್ಷದ ಯುವತಿ, ಯಲ್ಲಾಪುರದ 13 ವರ್ಷದ ಬಾಲಕ, ಸಿದ್ದಾಪುರದ 50 ವರ್ಷದ ವ್ಯಕ್ತಿ ಹಾಗೂ ಭಟ್ಕಳದ 18 ವರ್ಷದ ಯುವಕನನ್ನು ಬಿಡುಗಡೆ ಮಾಡಲಾಗಿದೆ. ಕ್ರಿಮ್್ಸ ನಿರ್ದೇಶಕ ಡಾ. ಗಜಾನನ ನಾಯ್ಕ, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಹಾಗೂ ಸಿಬ್ಬಂದಿ ಇದ್ದರು.
ಖಾಸಗಿ ಆಸ್ಪತ್ರೆಗಳಲ್ಲಿಲ್ಲ ಚಿಕಿತ್ಸೆ: ಸರ್ಕಾರಿ ಜಿಲ್ಲೆಯ 14 ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ಸಿಗುವುದಾಗಿ ಪಟ್ಟಿ ಸಿದ್ಧಪಡಿಸಿತ್ತು. ಆದರೆ, ಬಹುತೇಕ ಆಸ್ಪತ್ರೆಗಳು ಕರೊನಾ ಚಿಕಿತ್ಸೆ ನೀಡಲು ಸಿದ್ಧವಿಲ್ಲ. ಅಲ್ಲದೆ, ಯಾವುದೇ ತಯಾರಿ ಮಾಡಿಕೊಂಡಿಲ್ಲ. ಈ ಕುರಿತು ಸರ್ಕಾರ ನಮಗೆ ಯಾವುದೇ ಸೂಕ್ತ ನಿರ್ದೇಶನ ನೀಡಿಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವು ಕಣ್ಣಿನ ಆಸ್ಪತ್ರೆಗಳನ್ನೂ ಈ ಪಟ್ಟಿಯಲ್ಲಿ ಸೇರಿಸಿದ್ದು, ನಮ್ಮ ಆಸ್ಪತ್ರೆಗಳಲ್ಲಿ ಅದಕ್ಕಾಗಿ ಯಾವುದೇ ಸಮರ್ಪಕ ತಜ್ಞರು ಸೌಲಭ್ಯ ಇಲ್ಲ ಎಂದು ಆಸ್ಪತ್ರೆಗಳು ಹೇಳುತ್ತಿವೆ.
ಬೆಂಗಳೂರಿನಿಂದ ಬಂದವರ ಪರಿಶೀಲನೆ : ಬೆಂಗಳೂರಿನಿಂದ ಆಗಮಿಸಿದರಿಂದಲೂ ಕರೊನಾ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿಂದ ಬಂದವರ ಆರೋಗ್ಯ ಪರೀಕ್ಷೆಗೆ ಜಿಲ್ಲಾಡಳಿತ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ಗಳಿಗೆ ಕಾರವಾರ ತಹಸೀಲ್ದಾರ್ ಸೂಚನೆ ನೀಡಿದ್ದು, ಪ್ರಯಾಣಿಕರನ್ನು ಸರ್ಕಾರಿ ಆಸ್ಪತ್ರೆಯ ಆವರಣಕ್ಕೆ ಕರೆದೊಯ್ದು ಇಳಿಸುವಂತೆ ತಿಳಿಸಿದ್ದಾರೆ.
ಕೈ ಸುಟ್ಟ ಕ್ವಾರಂಟೈನ್ ಸೀಲ್ : ಕಾರವಾರ: ಮಹಾರಾಷ್ಟ್ರದಿಂದ ತಾಲೂಕಿನ ಸದಾಶಿವಗಡಕ್ಕೆ ಆಗಮಿಸಿ ಕ್ವಾರಂಟೈನ್ನಲ್ಲಿದ್ದ ವೈದ್ಯೆಯ ಕೈ ಸುಟ್ಟಿದೆ. ಸರ್ಕಾರದಿಂದ ಕೈಗೆ ಹಾಕಿದ ಕ್ವಾರಂಟೈನ್ ಸೀಲ್ನಿಂದ ಈ ರೀತಿ ಉಂಟಾಗಿದೆ. ಶಾಯಿ ಹಳೆಯದಾಗಿದ್ದರಿಂದಲೋ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಶಾಯಿ ಹಾಕಿದ್ದರಿಂದಲೋ ಈ ರೀತಿ ಆಗಿರಬಹುದು ಎಂದು ವೈದ್ಯೆ ಪ್ರತಿಕ್ರಿಯಿಸಿದ್ದಾರೆ.
ಅಂಕೋಲಾದಲ್ಲಿ ಆತಂಕ : ಅಂಕೋಲಾ: ತಾಲೂಕಿನ ಅಗ್ರಗೋಣದ 53 ವರ್ಷದ ವ್ಯಕ್ತಿಗೆ ಕರೊನಾ ಖಚಿತವಾಗಿರುವುದು ಕೇವಲ ಅಂಕೋಲಾ ಮಾತ್ರವಲ್ಲದೆ, ಗೋಕರ್ಣ ಹಾಗೂ ಕುಮಟಾ ಭಾಗದಲ್ಲೂ ಆತಂಕಕ್ಕೆ ಕಾರಣವಾಗಿದೆ.
52 ಮನೆಗಳಿರುವ ಶೇಡಿಕಟ್ಟಾವನ್ನು ಸೀಲ್ಡೌನ್ ಮಾಡಿ 117 ಜನರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ, ರೋಗಿ ಪರೀಕ್ಷೆಗೆ ತೆರಳಿದ ಗೋಕರ್ಣ ಆಸ್ಪತ್ರೆಯ ವೈದ್ಯರಿಬ್ಬರ ಗಂಟಲ ದ್ರವದ ಮಾದರಿಯನ್ನೂ ಪಡೆದುಕೊಳ್ಳಲಾಗಿದೆ. ಎಲ್ಲರ ವರದಿ ಬರುವುದು ಬಾಕಿ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯಕ ತಿಳಿಸಿದ್ದಾರೆ.
ಇನ್ನು ಸೋಂಕಿತ ಜುಲೈ 12 ರಂದು ನಡೆಯಲಿರುವ ತನ್ನ ಮಗಳ ಮದುವೆಗೆ ತಯಾರಿ ನಡೆಸಿದ್ದು, ಕುಮಟಾದ ಬಟ್ಟೆ ಅಂಗಡಿ, ಬಂಗಾರ, ಲಗ್ನ ಪತ್ರಿಕೆ, ಸೇರಿ ವಿವಿಧೆಡೆ ಓಡಾಟ ನಡೆಸಿದ್ದ ಎನ್ನಲಾಗಿದೆ.
ಕರೊನಾ ಪಾಸಿಟಿವ್ ಆದ ವಲಯವನ್ನೇ ಸೀಲ್ಡೌನ್ ಮಾಡಲಾಗಿದೆ. ಜನರು ತಮ್ಮ ಜಾಗೃತೆಯನ್ನು ತಾವೇ ವಹಿಸಿಕೊಳ್ಳಬೇಕು. ಇಂತಹ ಒಂದು ಪ್ರಕರಣವಾದಾಗ ಜನರು ಭಯಗೊಳ್ಳುವುದು ಸಾಮಾನ್ಯ. ಆದಷ್ಟು ಎಚ್ಚರಿಕೆಯಿಂದ ಇರಬೇಕು.| ಉದಯ ಕುಂಬಾರ, ತಹಸೀಲ್ದಾರ್, ಅಂಕೋಲಾ