ಜಿಲ್ಲೆ

ಮತಾಂತರಿಗಳನ್ನು ಎಸ್‌ಟಿ ಪಟ್ಟಿಯಿಂದ ತೆಗೆಯಿರಿ : ಗಿರಿಜನ ಸುರಕ್ಷಾ ವೇದಿಕೆಯ ಶ್ರೀನಿವಾಸ್ ಒತ್ತಾಯ

ರಾಮನಗರ: ಮತಾಂತರ ಆಗಿರುವ ವ್ಯಕ್ತಿಗಳ ಹೆಸರನ್ನು ಪರಿಶಿಷ್ಟ ಪಂಗಡದ ಪಟ್ಟಿಯಿಂದ ತೆಗೆಯಬೇಕು. ಅವರಿಗೆ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಗಿರಿಜನ ಸುರಕ್ಷಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಆರ್. ಶ್ರೀನಿವಾಸ್ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾರಂಪರಿಕ ಪರಿಶಿಷ್ಟ ಪಂಗಡಗಳು ಪಡೆಯುತ್ತಿರುವುದಕ್ಕಿಂತ ಹೆಚ್ಚು ಸೌಲಭ್ಯಗಳನ್ನು ಮತಾಂತರಗೊಂಡ ಪಂಗಡಗಳು ಪಡೆಯುತ್ತಿವೆ. ಪರಿಶಿಷ್ಟ ಜಾತಿಗಳ ವಿಷಯದಲ್ಲಿ ಇರುವ ಸ್ಪಷ್ಟತೆಯೇ ಪರಿಶಿಷ್ಟ ಪಂಗಡಗಳ ಸೌಲಭ್ಯಗಳ ವಿಚಾರದಲ್ಲೂ ಇರಬೇಕು. ಈ ಅನ್ಯಾಯ ಸರಿಪಡಿಸಬೇಕು ಎಂದರು.ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಗಿರಿಜನರ ವಿಶಿಷ್ಟ ಸಂಸ್ಕೃತಿ ಆಚಾರ ಹಾಗೂ ಸಾಮಾಜಿಕ ಹಿಂದುಳಿಯುವಿಕೆ ಗಮನದಲ್ಲಿರಿಸಿ ಮೀಸಲಾತಿ ನೀಡಲಾಯಿತು. ಆದರೆ ಮತಾಂತರಗೊಂಡು ಎಸ್‌ಟಿ ಸೌಲಭ್ಯ ಪಡೆಯುವ ವ್ಯಕ್ತಿಗಳು ತಮ್ಮ ಮೂಲ ಸಂಸ್ಕೃತಿ ಧರ್ಮ ಆಚಾರ ಹಾಗೂ ಪರಂಪರೆ ತ್ಯಜಿಸಿರುವುದರಿಂದ ಈ ವ್ಯಕ್ತಿಗಳಿಗೆ ಸಂವಿಧಾನ ಬದ್ಧವಾದ ಸೌಲಭ್ಯ ನೀಡಬಾರದು ಎಂದು ಆಗ್ರಹಿಸಿದರು.

ಮತಾಂತರಗೊಂಡ ವ್ಯಕ್ತಿ ತನ್ನ ಮೂಲ ಸಂಸ್ಕೃತಿ, ಪೂಜಾ ವಿಧಾನಗಳನ್ನು ತ್ಯಜಿಸುವುದರಿಂದ ಎಸ್‌ಟಿ ಸೌಲಭ್ಯದ ಹಕ್ಕು ಕಳೆದುಕೊಳ್ಳುತ್ತಾನೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗಿರಿಜನ ಸುರಕ್ಷಾ ವೇದಿಕೆಯು ಮತಾಂತರಗೊಂಡ ವ್ಯಕ್ತಿಗಳನ್ನು ಎಸ್‌ಟಿ ಪಟ್ಟಿಯಿಂದ ತೆಗೆದುಹಾಕಿ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಕಾನೂನು ಜಾರಿ ಮಾಡಬೇಕು ಎಂದರು.

ವಿಭಜನೆ ಬ್ರಿಟಿಷರ ಷಡ್ಯಂತ್ರ: ಬ್ರಿಟಿಷರು ಭಾರತವನ್ನು ಒಡೆದು ಆಳುವ ನೀತಿಯ ಅಂಗವಾಗಿ 1857ರ ಸ್ವಾತಂತ್ರ್ಯ ಸಂಗ್ರಾಮದ ನಂತರ 1881ರಲ್ಲಿ ಧರ್ಮ ಹಾಗೂ ಜಾತಿ ಆಧಾರಿತ ಜನಗಣತಿ ಪ್ರಾರಂಭಿಸಿದರು. 1881ರಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರಿಗೆ ಪ್ರತ್ಯೇಕ ಧಾರ್ಮಿಕ ಕೋಡ್ ನೀಡಿದ್ದರು, ಹಾಗೆಯೇ ಮುಂದಿನ ಜನಗಣತಿ ಸಂದರ್ಭದಲ್ಲಿ ಭಾರತದ ಜನರನ್ನು ವಿಭಜಿಸುವ ಷಡ್ಯಂತ್ರ ರೂಪಿಸಿದರು ಎಂದು ಆರ್.ಶ್ರೀನಿವಾಸ್ ಹೇಳಿದರು. ಅದರಂತೆ ಬೌದ್ಧ, ಸಿಖ್, ಜೈನ ಹಾಗೂ ಪಾರಸಿ ಮತಾವಲಂಬಿಗಳಿಗೆ ಜನಗಣತಿಯಲ್ಲಿ ಪ್ರತ್ಯೇಕ ಧಾರ್ಮಿಕ ಕೋಡ್ ನೀಡಲಾಯಿತು. ಸ್ವಾತಂತ್ರ್ಯಾ ನಂತರವೂ ನಮ್ಮ ಜನರನ್ನು ಒಡೆದು ಆಳುವ ಹುನ್ನಾರ ಮುಂದುವರಿಯಿತು. ಅದರಂತೆ 1951ರ ಜನಗಣತಿಯಲ್ಲಿ ಧಾರ್ಮಿಕ ಕೋಡ್‌ನ 8ನೇ ಕಲಂ (ಅನ್ಯ ಮತ ಅವಲಂಬಿ) ಸೇರ್ಪಡೆಗೊಳಿಸಲಾಯಿತು. ಇತ್ತೀಚೆಗೆ ಕೆಲವರು ತಮ್ಮದೇ ಆದ ಮತ ಧಾರ್ಮಿಕ ಕೋಡ್‌ಗೆ ಬೇಡಿಕೆ ಇಡುತ್ತಾರೆ. ಗಿರಿಜನರು ಪ್ರಕೃತಿ ಪೂಜಕರು, ಹಿಂದೂ ಧರ್ಮದ ಭಾಗವಾಗಿದ್ದಾರೆ. ಪ್ರಕೃತಿ, ಪ್ರಾಣಿ, ಪಕ್ಷಿ ಪೂಜಿಸುವುದು ಇವರ ವಿಶೇಷ. ಆದ್ದರಿಂದ ಗಿರಿಜನರು ಜನಗಣತಿ ಸಂದರ್ಭದಲ್ಲಿ(1)ನೇ ಕಲಂನಲ್ಲಿ ಮಾಹಿತಿಗಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.

ಭಾರತ ಸರ್ಕಾರದ 2006ರ ಅರಣ್ಯ ಹಕ್ಕು ಕಾಯ್ದೆಯ ವೈಯಕ್ತಿಕ ಅರಣ್ಯ ಕಾಯ್ದೆ ಹಕ್ಕು ನಿಯಮದಂತೆ ಪ್ರತಿ ಗಿರಿಜನ ಕುಟುಂಬಕ್ಕೆ 3 ಎಕರೆ ಭೂಮಿ ಹಾಗೂ ಸಮುದಾಯಿಕ ಅರಣ್ಯಹಕ್ಕು ನಿಯಮದಂತೆ ಗಿರಿಜನ ಹಾಡಿಯ ನಿವಾಸಿಗಳಿಗೆ ಸ್ಮಶಾನ, ದೇವಸ್ಥಾನ, ಸಮುದಾಯ ಭವನದ ನಿರ್ಮಾಣಕ್ಕೆ ಭೂಮಿ ನೀಡುವುದು ಗಿರಿಜನ ಹಾಡಿಯ ಅಭಿವೃದ್ಧಿಗಾಗಿ ಕಿರು ಉತ್ಪನ್ನ ಸಂಗ್ರಹ ಹಕ್ಕು ನೀಡಿದೆ. ಈ ಕಾನೂನಿನಂತೆ ಗಿರಿಜನರಿಗೆ ನೀಡಿರುವ ವೈಯಕ್ತಿಕ ಮತ್ತು ಸಾಮುದಾಯಿಕ ಅರಣ್ಯ ಹಕ್ಕನ್ನು ನಿವೇಶನ ರಹಿತ ಮೂಲಸೌಕರ್ಯವನ್ನು ರಾಜ್ಯ ಸರ್ಕಾರವು ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಗಿರಿಜನ ಸುರಕ್ಷಾ ವೇದಿಕೆ ಬೆಂಗಳೂರು ನಗರ ಸಮಿತಿ ಕಾರ್ಯದರ್ಶಿ ಕೃಷ್ಣ ಗುನ, ರಾಮನಗರ ಜಿಲ್ಲಾ ಕಾರ್ಯದರ್ಶಿ ಎಸ್.ರಾಜು, ತಾಲೂಕು ಪ್ರಮುಖ್ ಎನ್.ಮಹೇಶ ಬಡಿಗೇರ ಇದ್ದರು.