ಚಿತ್ರದುರ್ಗ: ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವ ಸರ್ಕಾರದ ನಿರ್ಧಾರ ಖಂಡಿಸಿ ಬಜರಂಗದಳ, ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಿರ್ಧಾರ ಹಿಂಪಡೆಯಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಭಾರತ ಸನಾತನ ಹಿಂದು ರಾಷ್ಟ್ರವಾಗಿದ್ದು, ಇಲ್ಲಿ ಅನ್ಯ ಧರ್ಮೀಯರೂ ಸಹಬಾಳ್ವೆ ನಡೆಸಲು ಸಂವಿಧಾನ ಅವಕಾಶ ನೀಡಿದೆ. ಅದರಂತೆ ಕರ್ನಾಟಕದಲ್ಲೂ ಅವಕಾಶವಿದ್ದು, ಒಪ್ಪಿಕೊಳ್ಳುತ್ತೇವೆ. ಆದರೆ, ಹಿಂದುಗಳಿಗೆ ಆಮಿಷವೊಡ್ಡಿ ಬಲವಂತವಾಗಿ ಮತಾಂತರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.
ನಾಡಿನಲ್ಲಿರುವ ನಮ್ಮ ಧರ್ಮೀಯರನ್ನು ಮತಾಂತರದಿಂದ ರಕ್ಷಿಸಿ, ಧರ್ಮ ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ. ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿಂದುಗಳ ಪಾತ್ರ ಹೆಚ್ಚಿದೆ. ಆದರೆ, ಸರ್ಕಾರದ ನಿರ್ಧಾರ ಸಮಸ್ತ ಹಿಂದುಗಳಿಗೆ ಮಾಡಿರುವ ದ್ರೋಹ ಎಂದು ಆರೋಪಿಸಿದರು.
ವೀರ ಸಾವರ್ಕರ್ ಸೇರಿ ದೇಶಭಕ್ತರನ್ನು ಪರಿಚಯಿಸಲು ಹಿಂದಿನ ಸರ್ಕಾರ ಶಾಲಾ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿದ್ದನ್ನೂ ಸಂಕುಚಿತ ಭಾವನೆ, ಅಲ್ಪಸಂಖ್ಯಾತರ ತುಷ್ಟೀಕರಿಸುವ ಉದ್ದೇಶದಿಂದ ಈಗಿನ ಸರ್ಕಾರ ತೆಗೆದು ಹಾಕಲು ನಿರ್ಧರಿಸಿದೆ. ಇದು ಸಮಾಜದಲ್ಲಿನ ಶಾಂತಿ, ಸುವ್ಯವಸ್ಥೆ ಕದಡುವ ತೀರ್ಮಾನವಾಗಿದೆ. ಕೂಡಲೇ ಹಿಂದಕ್ಕೆ ಪಡೆದು ಜನಪರ ಆಡಳಿತ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೋರಿದರು.
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರಭಂಜನ್, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ದಕ್ಷಿಣ ಪ್ರಾಂತ ಧರ್ಮಚಾರ್ಯ ಪ್ರಮುಖ ಓಂಕಾರ್, ಪದಾಧಿಕಾರಿಗಳಾದ ಕೇಶವ್, ಶ್ರೀನಿವಾಸ್, ರಂಗನಾಥ್, ಶಶಿಧರ್, ಶ್ರೀನಿವಾಸ್ (ಡೈರಿ), ಶಕ್ತಿ, ತೇಜು, ರಾಮು ರೇಣು, ಕಿಶೋರ್, ವಿಜಯಣ್ಣ, ದಿನೇಶ್ ಇತರರಿದ್ದರು.