ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾನೂನು ಹಿಂಪಡೆಯಲು ಕೈಗೊಂಡಿರುವ ನಿರ್ಧಾರವನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ವಿಶ್ವ ಹಿಂದು ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು. ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಸಾರ ಪ್ರಮುಖ ಸುನೀಲ ಭೈರವಾಡಗಿ, ಸಹ ಕಾರ್ಯದರ್ಶಿಗಳಾದ ಸುನೀಲ ಜಮಖಂಡಿ, ಶೇಖರಗೌಡ ಹರನಾಳ, ಹಲವರು ಉಪಸ್ಥಿತರಿದ್ದರು. 
ಜಿಲ್ಲೆ

ಮತಾಂತರ ನಿಷೇಧ ಕಾನೂನು ಹಿಂಪಡೆದರೆ ಹೋರಾಟ

ವಿಜಯಪುರ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾನೂನು ಹಿಂಪಡೆಯಲು ನಿರ್ಧರಿಸಿರುವುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಸದಸ್ಯರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಸಾರ ಪ್ರಮುಖ ಸುನೀಲ ಭೈರವಾಡಗಿ ಮಾತನಾಡಿ, ಭಾರತ ಹಿಂದು ರಾಷ್ಟ್ರವಾಗಿದ್ದು ಇಲ್ಲಿ ಹಿಂದುಗಳೊಡನೆ ಅನ್ಯಧರ್ಮೀಯರು ಸಹ ಸಹಬಾಳ್ವೆ ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲೂ ಸಹ ಹಿಂದುಗಳೊಡನೆ, ಅನ್ಯ ಧರ್ಮೀಯರು ಸಹ ತಮ್ಮ ಧರ್ಮ-ಮತಾಚರಣೆ ಮಾಡಲು ಅವಕಾಶವಿದೆ. ಇದನ್ನು ನಾವು ಒಪ್ಪುತ್ತೇವೆ. ಮತ್ತು ಪ್ರಶ್ನಿಸುವುದಿಲ್ಲ. ಆದರೆ ಹಿಂದುಗಳಿಗೆ ಆಮಿಷ ತೋರಿಸಿ ಅಥವಾ ಹೆದರಿಸಿ, ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರಳು ಮಾಡಿ ಮತಾಂತರಿಸುವುದನ್ನು ಖಂಡಿಸುತ್ತೇವೆ ಎಂದರು.

ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಅನ್ಯ ಧರ್ಮೀಯರಲ್ಲದೇ, ಅತಿ ಸಂಖ್ಯೆಯಲ್ಲಿ ಹಿಂದುಗಳೂ ಸಹ ಮತ ಹಾಕಿದ್ದು ಅವರ ಮತದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದಷ್ಟೇ ಅಲ್ಲ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು.

ಈ ರೀತಿ ಮತಾಂತರ ಕಾಯ್ದೆ ಹಿಂಪಡೆಯುವುದರಿಂದ ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದುಗಳಿಗೆ ದ್ರೋಹ ಬಗೆದಂತಾಗಿದೆ. ಕರ್ನಾಟಕದ ಹಿಂದುಗಳು ಇದನ್ನು ಖಂಡಿಸುವುದರೊಂದಿಗೆ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಧಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಹ ಕಾರ್ಯದರ್ಶಿಗಳಾದ ಸುನೀಲ ಜಮಖಂಡಿ, ಶೇಖರಗೌಡ ಹರನಾಳ ಮಾತನಾಡಿದರು. ಸುರೇಶ ಚವ್ಹಾಣ, ಪ್ರಕಾಶ ಬಿರಾದಾರ, ಸೋಮ ಹುಣಸಗಿ, ಸುರೇಶ ಕುಂಬಾರ, ಸಿದ್ದುರೂಡಿ ಬೋರಣ್ಣ, ಈರಯ್ಯ ಹಿರೇಮಠ, ಹಣಮಗೌಡ ಹೆಬ್ಬಾಳ, ಪ್ರಕಾಶ ಬಗಲಿ, ಕಲ್ಮೇಶ ಮೇಟಿ, ಶ್ರೀಧರ ಭಜಂತ್ರಿ, ನಿಖಿಲ ಬಿರಾದಾರ, ಶಿವಯೋಗೆಪ್ಪ ರಾಂಪುರ, ಶರಣು ಜೋಗೂರು, ನವೀನಗೌಡ ಪಾಟೀಲ ಮುಂತಾದವರು ಇದ್ದರು.