ಜಿಲ್ಲೆ

ಮತಯಂತ್ರ ಪ್ರಾತ್ಯಕ್ಷಿಕೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹ

ಮೈಸೂರು: ಎಲ್ಲೂ ಬಳಕೆಯಾಗದ ಹೊಸ ವಿದ್ಯುನ್ಮಾನ ಮತದಾನದ ಯಂತ್ರಗಳನ್ನು ಮೈಸೂರು ಜಿಲ್ಲೆಗೆ ತರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಇವುಗಳ ಪ್ರಾತ್ಯಕ್ಷಿಕೆ ಮಾಡಿಸುವ ಮೂಲಕ ಅನುಮಾನ ದೂರ ಮಾಡಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ 5,635 ಬ್ಯಾಲೆಟ್ ಯೂನಿಟ್, 3,958 ಕಂಟ್ರೋಲ್ ಯೂನಿಟ್‌ಗಳನ್ನು ತರಿಸಲಾಗಿದೆ. ಆದರೆ, ಇವು ಹೊಸ ವಿದ್ಯುನ್ಮಾನ ಮತದಾನದ ಯಂತ್ರಗಳಾಗಿದ್ದು, ಇದುವರೆಗೂ ಎಲ್ಲೂ ಬಳಕೆಯಾಗಿಲ್ಲ. ಬಳಕೆಯಾಗದ ಮತಯಂತ್ರಗಳನ್ನು ತರಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಹಳಷ್ಟು ಮತದಾರರ ಹೆಸರನ್ನು ಕೈಬಿಡುವ ಮೂಲಕ ಚುನಾವಣಾ ಅಕ್ರಮವೆಸಲು ಬಿಜೆಪಿ ಮುಂದಾಗಿತ್ತು. ಇದನ್ನು ಕಾಂಗ್ರೆಸ್ ಪತ್ತೆಹಚ್ಚಿ ಹೋರಾಟ ಮಾಡಿ ತನಿಖೆ ನಡೆಸುವ ಹಂತಕ್ಕೆ ತಂದಿದೆ. ಈ ತಂತ್ರ ವಿಫಲವಾದ್ದರಿಂದ ಈಗ ಹೊಸ ಮತಯಂತ್ರಗಳನ್ನು ತರಿಸಿರುವ ಅನುಮಾನ ವ್ಯಕ್ತವಾಗಿದೆ ಎಂದರು.
ಈ ಹೊಸ ಮತಯಂತ್ರಗಳನ್ನು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ತಯಾರಿಸಿದೆ. ಆದರೆ, ಇವುಗಳ ನಿರ್ವಹಣೆ ಮಾಡುವುದನ್ನು ಮುಂಬೈ ಮೂಲದ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿರುವುದು ಸಾಕಷ್ಟು ಅನುಮಾನ ಮೂಡಿಸುತ್ತಿದೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪ್ರತಿಯೊಂದು ಮತಯಂತ್ರದ ಪ್ರಾತ್ಯಕ್ಷಿಕೆ ಮಾಡಬೇಕು. ಆ ಮೂಲಕ ಮತಯಂತ್ರಗಳ ಬಗ್ಗೆ ವ್ಯಕ್ತವಾಗಿರುವ ಅನುಮಾನವನ್ನು ದೂರ ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಬಿಜೆಪಿಗೆ ಸಿಕ್ಕ ರೌಡಿಶೀಟರ್:
ಬೆಂಗಳೂರು ಪೊಲೀಸರಿಗೆ ಸಿಗದ ಮೋಸ್ಟ್ ವಾಂಟೆಡ್ ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಜನಪ್ರತಿನಿಧಿಗಳೊಂದಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾರೆ. ಪೊಲೀಸರ ಸಮ್ಮುಖದಲ್ಲಿಯೇ ಕಾರ್ಯಕ್ರಮ ಮಾಡುವುದು ಆಶ್ವರ್ಯ ಮೂಡಿಸುತ್ತದೆ ಎಂದು ಟೀಕಿಸಿದರು.
ರೌಡಿಶೀಟರ್ ಪಟ್ಟದಿಂದ ಇನ್ನೂ ಮುಕ್ತವಾಗಿಲ್ಲದ ಸೈಲೆಂಟ್ ಸುನೀಲ್ ಜತೆ ಸಂಸದರಾದ ತೇಜಸ್ವಿಸೂರ್ಯ, ಪಿ.ಸಿ. ಮೋಹನ್, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಹಲವು ಮುಖಂಡರು ವೇದಿಕೆ ಹಂಚಿಕೊಂಡಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.