ಜಿಲ್ಲೆ

ಮತಪಟ್ಟಿ ಪರಿಷ್ಕರಣೆ :ಹಾಸನದಲ್ಲೂ ಅವ್ಯವಹಾರ, ಎಚ್‌ಡಿ ರೆವಣ್ಣ ಆರೋಪ

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಕೆಲವರ ಹಿತಾಸಕ್ತಿಗೆ ಬೇಕಾದಂತೆ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಕೈ ಬಿಡಲಾಗುತ್ತಿದೆ ಎಂದು ದೂರಿದರು.

ಕೆಲವರು ಗೌರಿ ಹಬ್ಬದ ಬಾಗಿನ ನೀಡುವ ನೆಪದಲ್ಲಿ ಮನೆ ಮನೆಗೆ ತೆರಳಿ ಸೀರೆ ಹಂಚಿದ್ದಾರೆ. ಈ ಸಂದರ್ಭದಲ್ಲಿ ಮತದಾರರ ವಿವರ ಪಡೆದುಕೊಂಡಿದ್ದಾರೆ. ತಮಗೆ ಮತ ದೊರೆಯುವುದಿಲ್ಲ ಎಂಬ ಅನುಮಾನ ಇದ್ದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ರಾಜ್ಯ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇನೆ ಎಂದರು.

ನಯಾಪೈಸೆ ಕೊಟ್ಟಿಲ್ಲ:
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ರಸ್ತೆಗಳು ಹಾಳಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಲೋಕೋಪಯೋಗಿ ಇಲಾಖೆಯಿಂದ ಹಾಸನ ಜಿಲ್ಲೆಗೆ ನಯಾಪೈಸೆ ಅನುದಾನ ಬಂದಿಲ್ಲ. ಮನವಿ ಸಲ್ಲಿಸಲು ಲೋಕೋಪಯೋಗಿ ಸಚಿವರು ಕೈಗೆ ಸಿಗುತ್ತಿಲ್ಲ ಎಂದು ಕಿಡಿಕಾರಿದರು.

ತೋಟಗಾರಿಕೆ ಇಲಾಖೆ ಮಂತ್ರಿ ಯಾರು, ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಸರ್ಕಾರವೇ ಅವರನ್ನು ಹುಡುಕಿ ಕೊಡಬೇಕು. ಮಳೆಯಿಂದ ಅಪಾರ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದರೂ ಒಮ್ಮೆಯೂ ಭೇಟಿ ನೀಡಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಜ್ಯೋತಿಷಿ ಅಲ್ಲ:
‘ನಮ್ಮ ಪಕ್ಷದಲ್ಲಿ ರೇವಣ್ಣನೇ ಜ್ಯೋತಿಷಿ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸದ್ಯಕ್ಕೆ ಬೇಡ ಎಂದಿದ್ದಾನೆ’ ಎಂಬುದಾಗಿ ಇತ್ತೀಚೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಕುರಿತು ಗಮನ ಸೆಳೆದಾಗ, ನಾನು ಜ್ಯೋತಿಷಿ ಅಲ್ಲ, ಕೆಲ ಪಂಡಿತರನ್ನು ಕೇಳಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೆ ಒಳ್ಳೆಯದು ಎಂಬ ಸಲಹೆ ನೀಡಿದ್ದೇನೆ ಅಷ್ಟೇ. ಕುಮಾರಸ್ವಾಮಿ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಮ್ಮ ಮಧ್ಯೆ ಬಿರುಕು ಮೂಡಿಸಲು ಸಾಧ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.


ಭವಾನಿ ಅವರಿಗೆ ಹಾಸನದಿಂದ ಟಿಕೆಟ್ ನೀಡುವ ವಿಚಾರ ಕುರಿತು ಪ್ರಸ್ತಾಪಿಸಿದಾಗ, ಭವಾನಿ ಅವರು ಹಿಂದೆ ಬೇಲೂರು ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದರು. ಅದೇ ರೀತಿ ಹಾಸನದಲ್ಲೂ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಎಲ್ಲ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಒಮ್ಮೆಗೇ ಬಿಡುಗಡೆ ಆಗಲಿದೆ ಎಂದರು.

ಶಿವಲಿಂಗೇಗೌಡ ಪಕ್ಷ ಬಿಡುವುದಿಲ್ಲ:
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ. 15 ದಿನಗಳ ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ದೇವೇಗೌಡರು ಇರುವವರೆಗೂ ಪಕ್ಷ ಬಿಡುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಶಿವಲಿಂಗೇಗೌಡರು ಸಿದ್ದರಾಮಯ್ಯ ಅವರೊಂದಿಗೆ ಚೆನ್ನಾಗಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಸಿದ್ದರಾಮಯ್ಯನವರು ನನಗೂ ಆಪ್ತರಿದ್ದಾರೆ ಎಂದು ನುಡಿದರು.