ಜಿಲ್ಲೆ

ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 19.64 ಲಕ್ಷ ರೂ. ಮೊತ್ತದ ವಸ್ತುಗಳು ಜಪ್ತಿ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ 19.64 ಲಕ್ಷ ರೂ. ಮೊತ್ತದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಹಂಚ್ಯಾ ಗ್ರಾಮದ ಸನ್‌ಫ್ಯೂರ್ ಗಾರ್ಡನ್ ಬಡಾವಣೆಯ ಮನೆ ಕಳೆಭಾಗದಲ್ಲಿದ್ದ ಗೋದಾಮಿನ ಮೇಲೆ ಶನಿವಾರ ಪ್ಲೈಯಿಂಗ್ ಸ್ಕ್ವಾಡ್ ದಾಳಿ ಮಾಡಿದಾಗ ಇದು ಪತ್ತೆಯಾಗಿದೆ.

732 ಅಕ್ಕಿ ಬ್ಯಾಗ್(ಪ್ರತಿ ಬ್ಯಾಗ್‌ನಲ್ಲಿ 26 ಕೆಜಿ), ಅಡುಗೆ ಎಣ್ಣೆ, ಸೋಪು, ರವೇ, ಪೇಸ್ಟ್, ಇತರ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು, 722 ಕಿಟ್ ಬ್ಯಾಗ್‌ಗಳು, ಅಡಿಗೆ ಎಣ್ಣೆಯ ತಲಾ 10 ಪೌಚ್‌ಗಳಿರುವ 146 ಬಾಕ್ಸ್‌ಗಳು, ವನಸ್ಪತಿ ಎಣ್ಣೆಯ ತಲಾ 10 ಪೌಚ್‌ಗಳಿರುವ 73 ಬಾಕ್ಸ್‌ಗಳು, ತಲಾ 12 ಪೌಚ್‌ಗಳಿರುವ 60 ಜ್ಯೂಸ್ ಬಾಕ್ಸ್‌ಗಳು ಸಂಗ್ರಹಿಸಿ ಇಡಲಾಗಿತ್ತು.

ಸಿಎಸ್‌ಆರ್ ಅನುದಾನದ ಮುಖಾಂತರ ಮಾಸೂಮ್ ಟ್ರಸ್ಟ್‌ಗೆ ಈ ವಸ್ತುಗಳು ಬಂದಿರುವುದು ತಿಳಿದು ಬಂದಿದೆ. ಬಡ ಕುಟುಂಬಗಳಿಗೆ ಹಂಚಿಕೆ ಮಾಡಲು ಇಟ್ಟಿಕೊಂಡಿರುವುದಾಗಿ ಮಾಲೀಕರು ತಿಳಿಸಿದ್ದಾರೆ. ಆದರೆ, ಯಾವುದೇ ಅನುಮತಿ ಪಡೆದಿರುವ ದಾಖಲಾತಿ ಹಾಜರು ಪಡಿಸಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಮತದಾರರಿಗೆ ಆಮಿಷ ಒಡ್ಡುವ ಅನುಮಾನ ವ್ಯಕ್ತವಾಗಿದೆ.

ಜತೆಗೆ, ಶನಿವಾರ ಬೆಳಗ್ಗೆ 9ರಿಂದ ಭಾನುವಾರ ಬೆಳಗ್ಗೆ 9ರ ವರೆಗೆ ಜಿಲ್ಲೆಯಲ್ಲಿ 11.15 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಸಿಬ್ಬಂದಿ 14,100 ರೂ.ಮೊತ್ತದ 33 ಲೀಟರ್ ಮದ್ಯವನ್ನು ಸ್ವಾಧೀನ ಪಡೆದುಕೊಂಡಿದ್ದಾರೆ.