ಜಿಲ್ಲೆ

ಮತದಾರರನ್ನು ಮತಗಟ್ಟೆಗೆ ಕರೆತರಲು ಪ್ರೇರೇಪಿಸಿ

ಚಿತ್ರದುರ್ಗ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಾದ್ಯಂತ ಏ. 26ರಂದು ಅರ್ಹರೆಲ್ಲರೂ ಹಕ್ಕು ಚಲಾಯಿತಿ, ಮತದಾನ ಪ್ರಮಾಣ ಹೆಚ್ಚಿಸುವ ಮೂಲಕ ನಮ್ಮನ್ನಾಳುವ ಸಮರ್ಥ ಜನನಾಯಕನನ್ನು ಆಯ್ಕೆ ಮಾಡಿ. ಪ್ರಜಾಪ್ರಭುತ್ವದ ಮೌಲ್ಯ ಗಟ್ಟಿಗೊಳಿಸಿ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸಲಹೆ ನೀಡಿದರು.

ಮತದಾರರ ಧ್ವಜ ದಿನಾಚರಣೆ ಅಂಗವಾಗಿ ಅರ್ಹರಲ್ಲಿ ಜಾಗೃತಿ ಮೂಡಿಸಲು ನಮ್ಮ ನಡೆ, ಮತಗಟ್ಟೆಯ ಕಡೆ ಎಂಬ ಘೋಷವಾಕ್ಯದಡಿ ನಗರದ ಸೆಂಟ್ ಥಾಮಸ್ ಶಾಲಾ ಆವರಣದಲ್ಲಿ ಭಾನುವಾರ ನಡೆದ ಧ್ವಜರೋಹಣ ನೆರವೇರಿಸಿ ಮಾತನಾಡಿದರು.

ನಗರ ವ್ಯಾಪ್ತಿಯ ಪ್ರಜ್ಞಾವಂತ ಮತದಾರರೆಲ್ಲರೂ ಮತಗಟ್ಟೆಗೆ ತೆರಳಿ ಸ್ವಯಂ ಪ್ರೇರಿತರಾಗಿ, ಯಾವುದೇ ಆಸೆ-ಆಮಿಷಗಳಿಗೆ ಮಣೆ ಹಾಕದೆಯೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಚುನಾವಣೆಗಳು ದೇಶದ ಪ್ರತಿ ಪ್ರಜೆಯ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಲಿವೆ. ಅಂತೆಯೇ ಜಾಗತಿಕ ವೇದಿಕೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಸರ್ವೋಚ್ಛ ಸ್ಥಾನವನ್ನು ಪ್ರದರ್ಶಿಸಲಿದೆ. ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿರುವ ಕಾರ್ಯಕ್ರಮಗಳಿಂದಾಗಿ ಹಲವು ಮತದಾರರನ್ನು ತಲುಪಲು ಸಾಧ್ಯವಾಗಲಿದೆ. ಇದರ ಫಲಶೃತಿಯಾಗಿ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಮತದಾನ ನಡೆಯುವ ಆಶಯ ಹೊಂದಲಾಗಿದೆ ಎಂದರು.

ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಮಾತನಾಡಿ, ಈ ಚುನಾವಣೆಗೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸತತವಾಗಿ ಶ್ರಮಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿರುವ ಅರ್ಹ ಪ್ರಜೆಗಳೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂಬುದೇ ಇದರ ಉದ್ದೇಶ ಎಂದು ಹೇಳಿದರು.

ಶಾಲಾ ಸಂಕೀರ್ಣದಲ್ಲಿ ಸಖಿ ಮತಗಟ್ಟೆ: ಎಸ್‌ಪಿ ಕಚೇರಿ ಮಾರ್ಗದ ಸೆಂಟ್ ಥಾಮಸ್ ಶಾಲಾ ಆವರಣದಲ್ಲಿ 30ನೇ ವಾರ್ಡ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ ೨೨೦ರಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ಮತದಾರರಿದ್ದು, ಅವರನ್ನು ಆಕರ್ಷಿಸಲು ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ತಿಳಿ ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿದೆ. ಮತದಾನ ದಿನದಂದು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ವಾಕಥಾನ್ ಅಂತಿಮವಾಗಿ ಸೆಂಟ್ ಥಾಮಸ್ ಶಾಲೆಯಲ್ಲಿ ಸಂಪನ್ನಗೊಂಡಿತು. ನಗರಸಭೆ ಪೌರಾಯುಕ್ತ ಎಂ.ರೇಣುಕಾ, ಜಿಪಂ ಉಪಕಾರ್ಯದರ್ಶಿ ಪಿ.ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ್, ಪರಿಶಿಷ್ಟ ಜಾತಿ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಪರಮೇಶ್ವರಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಡಿಎಚ್‌ಒ ಡಾ.ರೇಣುಪ್ರಸಾದ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಿ.ಮಧು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಇತರರಿದ್ದರು.