ಹೊಳೆನರಸೀಪುರ: ಯುವಕ, ಯುವತಿಯರು ತಮ್ಮ ದಾಖಲಾತಿಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗೋಪಾಲ್ ಸಲಹೆ ನೀಡಿದರು.
ಪಟ್ಟಣದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಜಾಥಾ ಹಾಗೂ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಮ್ಮ ಗುರುತಿನ ಚೀಟಿಯ ತಿದ್ದುಪಡಿ ಬದಲಾವಣೆ ಮತ್ತು ತಮ್ಮ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದರೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ತಿಳಿಸಿದರು.
ಹೊಸದಾಗಿ ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡುವವರು ನಮೂನೆ 6 ಹಾಗೂ ಹೆಸರು ಕೈ ಬಿಟ್ಟಿದ್ದಾರೆ ಮತ್ತು ಬದಲಾವಣೆಗೆ ನಮೂನೆ 7ರ ಅರ್ಜಿ ತುಂಬಿ ತಮ್ಮ ಹತ್ತಿರದ ಬಿಎಲ್‌ಒ ಅವರಿಗೆ ತಲುಪಿಸಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಹಕ್ಕು 18 ವರ್ಷ ತುಂಬಿದ ಎಲ್ಲ ಜನರಿಗೂ ಇದೆ. ಆದ್ದರಿಂದ ಮತ ಚಲಾಯಿಸುವ ತಮ್ಮ ಹಕ್ಕನ್ನು ಗಳಿಸಿಕೊಳ್ಳಬೇಕಾದರೆ ಕಡ್ಡಾಯವಾಗಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕಾಗುತ್ತದೆ. ಸಾರ್ವಜನಿಕರು ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಅಥವಾ ತಿದ್ದುಪಡಿ ಆಗಬೇಕೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದರು.
ಇದೇ ಸಮಯದಲ್ಲಿ ಮತದಾನದ ಸಂಬಂಧ ಬೀದಿ ನಾಟಕ ನಡೆಸುವ ಮೂಲಕ ಅರಿವು ಮೂಡಿಸಲಾಯಿತು. ಪುರಸಭೆಯ ಮುಖ್ಯಾಧಿಕಾರಿ ವಿಡಿ ಶಾಂತಲಾ ಪುರಸಭೆ ಅಧ್ಯಕ್ಷೆ ಜ್ಯೋತಿ ಮಂಜುನಾಥ್ ಹಾಗೂ ಬೀದಿ ನಾಟಕದ ತಂಡ ಇದ್ದರು.