ಜಿಲ್ಲೆ

ಮತದಾರರ ಕೈಬಿಟ್ಟಿದ್ದರೆ ಇನ್ನೊಮ್ಮೆ ಪರಿಶೀಲನೆ

ಮೈಸೂರು: ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಮತದಾರರನ್ನು ಕೈಬಿಟ್ಟಿರುವ ಕುರಿತು ಇನ್ನೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಮತದಾರರನ್ನು ಕೈಬಿಟ್ಟಿರುವ ಕುರಿತು ಅನುಮಾನ ವ್ಯಕ್ತಪಡಿಸಿ ತಮ್ಮನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದೊಂದಿಗೆ ಡಿಸಿ ಕಚೇರಿಯಲ್ಲಿ ಗುರುವಾರ ಚರ್ಚೆ ನಡೆಸಿದ ಅವರು, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಚುನಾವಣಾ ಅಧಿಕಾರಿಗಳು ಮಾಡುತ್ತಿದ್ದಾರೆ. ಯಾವುದೇ ಖಾಸಗಿ ಸಂಸ್ಥೆಗೆ ನೀಡಿಲ್ಲ. ಮತದಾರರ ಪರಿಷ್ಕರಣೆ ನಿರಂತರ ಪ್ರಕ್ರಿಯೆ ಆಗಿದ್ದು, ನಿಮ್ಮ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ 1.20 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ನಿಮ್ಮ ಬಳಿ ಇರುವ ಮತದಾರರ ಪಟ್ಟಿಯಲ್ಲಿ 1,45,000 ಮತದಾರರ ಹೆಸರು ತೆಗೆಯಲಾಗಿದೆ ಎಂದು ಹೇಳುತ್ತಿದ್ದೀರಿ. ಇದನ್ನು ಕೂಡ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮಾತನಾಡಿ, ಈ ಹಿಂದೆ ಎಂದೂ ಆಗದಷ್ಟು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ನಮ್ಮ ಬಳಿ ಇರುವ ಮತದಾರರ ಪಟ್ಟಿಯಲ್ಲಿ ಲೆಕ್ಕ ಹಾಕಿದ್ದಾಗ 1,45,000 ಹೆಸರನ್ನು ಕೈಬಿಡಲಾಗಿದೆ. ಇಷ್ಟೊಂದು ಸಂಖ್ಯೆಯ ಮತದಾರರನ್ನು ಒಂದೇ ಸಲಕ್ಕೆ ತೆಗೆದಿರುವುದು ಅನುಮಾನ ಮೂಡಿಸಿದೆ. ಈ ಪರಿಷ್ಕರಣೆ ಚುನಾವಣಾ ಆಯೋಗದ ಮಾರ್ಗಸೂಚಿಗೆ ಅನುಗುಣವಾಗಿ ನಡೆದಿಲ್ಲ ಎಂದು ದೂರಿದರು.

ದೊಡ್ಡ ಪ್ರಮಾಣದ ಮತದಾರರ ಹೆಸರನ್ನು ತೆಗೆಯುವಾಗ ರಾಜಕೀಯ ಪಕ್ಷಗಳ ಗಮನಕ್ಕೆ ತರಬೇಕು. ಆದರೆ, ಮತದಾರರನ್ನು ಕೈಬಿಡುವ ಪ್ರಕ್ರಿಯೆ ಮುಗಿದ ಬಳಿಕ ಸಭೆ ಕರೆದಿದ್ದಾರೆ. ಈ ಪಟ್ಟಿ ಪರಿಷ್ಕರಣೆ ಸರ್ಕಾರಿ ಅಧಿಕಾರಿಗಳಿಂದ ಆಗಿದೆಯೋ, ಖಾಸಗಿ ಸಂಸ್ಥೆಯಿಂದ ಆಗಿದೆಯೋ ಎಂಬುದನ್ನು ಖಾತ್ರಿ ಮಾಡಬೇಕು. ಜತೆಗೆ, ವಿಶೇಷ ತಂಡವನ್ನು ರಚಿಸಿ, ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಹೆಸರು ಸೇರ್ಪಡೆ ಮಾಡುವ ಬಗ್ಗೆ ಗೊಂದಲ ಇದೆ. 15 ದಿನಗಳ ಒಳಗೆ ದೃಢೀಕರಣ ನೀಡಿ ಖಾತ್ರಿ ಮಾಡಿ ಎಂದು ಅಂಚೆ ಮೂಲಕ ನೊಟೀಸ್ ನೀಡಬೇಕು. ಭೌತಿಕವಾಗಿ ಪರಿಶೀಲಿಸಬೇಕು. ಆದರೆ, ಈ ಕೆಲಸವಾಗಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮುಖಂಡರಾದ ಭಾಸ್ಕರ್ ಎಲ್.ಗೌಡ, ಎಡತಲೆ ಮಂಜುನಾಥ್, ಪ್ರಸಾದ್, ಗೋಪಿನಾಥ್, ಮಹೇಶ್, ಶೌಕತ್ ಪಾಷ, ಸುರೇಶ್, ಶಿವಪ್ರಸಾದ್, ಸುರೇಶ್ ಪಾಳ್ಯ, ತಿಮ್ಮಯ್ಯ ಇತರರು ಇದ್ದರು..

ಇವಿಎಂ ಪರಿಶೀಲನೆಗೆ ಅವಕಾಶಎಂ3 ಎಂಬ ಕಂಪನಿಯಿಂದ ಮತಯಂತ್ರಗಳು (ಇವಿಎಂ) ಬಂದಿದೆ. ಹೀಗೆ ಬಂದಿರುವ 24ನೇ ಜಿಲ್ಲೆ ಮೈಸೂರು. ಈ ಬಗ್ಗೆ ನೋಟಿಫಿಕೇಷನ್ ಕೂಡ ನೀಡಲಾಗಿದೆ. ಅವುಗಳನ್ನು ಇರಿಸಿರುವ ಬಗ್ಗೆ ವಿಡಿಯೋ ರೆಕಾರ್ಡ್ ಆಗಿದೆ. ಯಾವುದೇ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ಇವಿಎಂ ಪರಿಶೀಲನೆ ಮಾಡಲು ಅವಕಾಶವಿದೆ.ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ.