ಜಿಲ್ಲೆ

ಮತದಾನದ ಮಹತ್ವ ಅರಿತುಕೊಳ್ಳಿ

ಚಾಮರಾಜನಗರ: ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದ್ದು, ತಪ್ಪದೇ ಎಲ್ಲರೂ ಮತ ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಹೇಳಿದರು.

ತಾಲೂಕಿನ ಹರದನಹಳ್ಳಿ ಬಳಿ ಇರುವ ಕೃಷಿ ಮಹಾ ವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಕೃಷಿ ಮಹಾ ವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಮತದಾರ ಮತದಾನದಿಂದ ಹೊರಗೆ ಉಳಿಯಬಾರದು. ಮತ ಚಲಾಯಿಸುವ ಮೂಲಕ ಸದೃಢ ಪ್ರಜಾಪ್ರಭುತ್ವ ನಿರ್ಮಾಣ ಮಾಡಬಹುದು ಎಂದರು. 2011ರ ಜ.25ರಂದು ರಾಷ್ಟ್ರೀಯ ಮತದಾರರ ದಿನ ಎಂದು ಘೋಷಿಸಲಾಯಿತು. ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದು, ಮತದಾನದ ಪ್ರಮಾಣ ಹೆಚ್ಚಿಸುವುದು, ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು. 18 ವರ್ಷ ಮೇಲ್ಪಟ್ಟ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದು ಇದರಲ್ಲಿ ಒಳಗೊಂಡಿದೆ ಎಂದು ವಿವರಿಸಿದರು.

ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ, ಅಲ್ಲಿ ಪ್ರತಿಯೊಬ್ಬ ನಾಗರಿಕನು ಮತದಾನದ ಮೂಲಭೂತ ಹಕ್ಕನ್ನು ಹೊಂದಿದ್ದಾನೆ ಎಂದರು. ಇದೇ ವೇಳೆ ನ್ಯಾಯಾಧೀಶರಾದ ಈಶ್ವರ್ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಸಿ ದೊರೆಸ್ವಾಮಿ, ಟಿ.ಜೆ.ಸುರೇಶ್, ಡಾ.ಪ್ರಕಾಶ್ ಮತ್ತು ಇತರರು ಇದ್ದರು.