ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇದೇ ಮೇ ೭ ರಂದು ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ಎಲ್ಲ ರೀತಿಯ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರವಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಸಕ್ತ ಲೋಕಸಭಾ ಚುನಾವಣೆಗೆ ಪುರುಷರು ೮೯೫೪೩೨, ಮಹಿಳೆಯರು ೯೧೦೭೫೧ ಹಾಗೂ ಇತರೆ ೯೪ ಸೇರಿ ಒಟ್ಟು ೧೮,೦೬,೧೮೩ ಮತದಾರರು ಮತ ಚಲಾಯಿಸಲಿದ್ದು, ಅದಕ್ಕಾಗಿ ೧೯೪೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಧೋಳ ಮೀಸಲು ಕ್ಷೇತ್ರದಲ್ಲಿ ೨೧೨, ತೇರದಾಳದಲ್ಲಿ ೨೩೬, ಜಮಖಂಡಿ ೨೩೨, ಬೀಳಗಿ ೨೬೦, ಬಾದಾಮಿ ೨೬೦, ಬಾಗಲಕೋಟೆ ೨೬೭ ಹಾಗೂ ಹುನಗುಂದ ಕ್ಷೇತ್ರದಲ್ಲಿ ೨೫೫, ನರಗುಂದದಲ್ಲಿ ೨೨೦ ಮತಗಟಗಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸ್ಥಾಪಿಸಲಾದ ೧೯೪೬ ಮತಗಟ್ಟೆಗಳ ಪೈಕಿ ೧೬೮೩ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್, ೭೦ ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫರ್, ೨೫೦ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರವರ್ ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೆಂಡಿಂಗ್ ಅಧಿಕಾರಿ ಹಾಗೂ ೩ ಜನ ಪೊಲಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಶೇ.೧೨೦ ರಷ್ಟು ಹೆಚ್ಚುವರಿ ಸಿಬ್ಬಂದಿಗಳು ಸೇರಿ ಒಟ್ಟು ೯೨೭೪ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನೇಮಕ ಮಾಡಲಾಗಿದೆ.
ಮಸ್ಟರಿಂಗ್ ಕೇಂದ್ರಗಳ ವಿವರ
ಮತಗಟ್ಟೆ ಸಿಬ್ಬಂದಿಗಳು ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ತೆರಳಲು ಪ್ರತಿ ಮತಕ್ಷೇತ್ರವಾರು ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಧೋಳ ಕ್ಷೇತ್ರಕ್ಕೆ ಮುಧೋಳ ಆರ್.ಎಂ.ಜಿ ಪಿಯು ಕಾಲೇಜ, ತೇರದಾಳ ಕ್ಷೇತ್ರಕ್ಕೆ ಬನಹಟ್ಟಿ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ & ವಾಣಿಜ್ಯ ಕಾಲೇಜ, ಜಮಖಂಡಿ ಕ್ಷೇತ್ರಕ್ಕೆ ಜಮಖಂಡಿ ಸರಕಾರಿ ಪಿ.ಬಿ ಪದವಿ ಪೂರ್ವ ಕಾಲೇಜ (ಪ್ರೌಢಶಾಲಾ ವಿಭಾಗ), ಬೀಳಗಿ ಕ್ಷೇತ್ರಕ್ಕೆ ಬೀಳಗಿ ಸಿದ್ದೇಶ್ವರ ಕಾಂಪೋಜಿಟ್ ಪಿಯು ಕಾಲೇಜ, ಬಾದಾಮಿ ಕ್ಷೇತ್ರಕ್ಕೆ ಬಾದಾಮಿ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆ, ಬಾಗಲಕೋಟೆ ಕ್ಷೇತ್ರಕ್ಕೆ ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ, ಹುನಗುಂದ ಕ್ಷೇತ್ರಕ್ಕೆ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಸ್ಥೆ (ಪ್ರೌಢಶಾಲಾ ವಿಭಾಗ) ಹಾಗೂ ನರಗುಂದ ಕ್ಷೇತ್ರಕ್ಕೆ ನರಗುಂದದ ಸರಕಾರಿ ಇಂಜಿನೀಯರಿಂಗ್ ಕಾಲೇಜನಲ್ಲಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ನೀತಿ ಸಂಹಿತೆ ಉಲ್ಲಂಘನೆಯಡಿ ೩ ಪ್ರಕರಣ ದಾಖಲು
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯಲ್ಲಿ ಒಟ್ಟು ೩ ಪ್ರಕರಣಗಳ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಹುನಗುಂದ ಮತಕ್ಷೇತ್ರದಲ್ಲಿ ೨ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಕರಣ ದಾಖಲಾಗಿವೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿ ವಿವರಣೆ ಪಡೆದುಕೊಳ್ಳಲಾಗಿದೆ. ಇಲ್ಲಿಯವರೆಗೆ ೨.೪೪ ಕೋಟಿ ರೂ.ಗಳ ಜಪ್ತಿ ಮಾಡಲಾಗಿದ್ದು, ದಾಖಲಾತಿ ಪೂರೈಸಿದ ಹಿನ್ನಲೆಯಲ್ಲಿ ಹಣವನ್ನು ಮರಳಿ ಕೊಡಲಾಗಿದೆ. ೧.೦೭ ಕೋಟಿ ಮೊತ್ತದ ಲಿಕ್ಕರ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ತಿಳಿಸಿದರು.
ಮತದಾರರ ಮತ ಚಲಾವಣೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಮತಕ್ಷೇತ್ರದಲ್ಲಿ ೪೦ ಮಹಿಳಾ ಸಖಿ ಮತಗಟ್ಟೆ, ತಲಾ ೫ ರಂತೆ ವಿಶೇಷ ಚೇತನರ, ಯುವಜನ ನಿರ್ವಹಣೆಯ, ಥೀಮ್ ಆಧಾರಿತ ಹಾಗೂ ಸಾಂಪ್ರದಾಯಿಕ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಮತಗಟ್ಟೆಗೆ ತೆರಳಲು ಗ್ರಾ.ಪಂಯಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ. ಮತದಾರರಿಗೆ ಮತಗಟ್ಟೆಯಲ್ಲಿ ಮಾಹಿತಿ ನೀಡಲು ೧೭೨೬ ಎನ್.ಎಸ್.ಎಸ್ ವಿದ್ಯಾರ್ಥಿಗಳನ್ನು ವಾಲೆಂಟರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮತಗಟ್ಟೆಗಳಲ್ಲಿ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಕುರೇರ ತಿಳಿಸಿದರು.
ಪೊಲೀಸ್ ಸಿಬ್ಬಂದಿಗಳ ನಿಯೋಜನೆ :
ಮತದಾನ ಸುಸೂತ್ರವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ೨೧ ಜನ ಪೊಲೀಸ್ ಇನ್ಸಪೆಕ್ಟರ, ೧೫೧೯ ಪೊಲೀಸ್, ೪೧೮ ಹೋಮಗಾರ್ಡ, ೫ ಕೆ.ಎಸ್.ಆರ್.ಪಿ, ೩ ಸಶಸ್ತç ಮೀಸಲು ಪಡೆಯ ೮೫ ಸಿಬ್ಬಂದಿ ಸೇರಿದಂತೆ ಒಟ್ಟು ೩೫೦೦ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ೧೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಜನತಾ ಪ್ರಾತಿನಿದ್ಯ ಅಧಿನಿಯಮದಡಿ ಪ್ರಚಾರ ನಿಷೇಧವಿರುತ್ತದೆ. ಧ್ವನಿವರ್ಧಕ, ಮೆಗಾ ಫೋನ್‌ಗಳು ಮತ್ತು ಅನುಚಿತ ವರ್ತನೆ ನಿಷೇಧವಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಪರಶುರಾಮ ಶಿನ್ನಾಳಕರ, ಚುನಾವಣಾ ತಹಶೀಲ್ದಾರ ಪಂಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.