ಬಾಗಲಕೋಟೆ: ದೇಶಕ್ಕೆ ಒಳ್ಳೆಯ ಆಡಳಿತವನ್ನು ತರಲು ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಯುವ ಜನತೆ ಯಾವುದೇ ಆಶೆ, ಆಮೀಷಗಳಿಗೆ ಒಳಗಾಗದೇ ಮತದಾನದ ಮಹತ್ವವನ್ನು ಅರಿತು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಪ್ರತಿಯೊಂದು ಮತದಾನ ಮಹತ್ವವಾಗಿದ್ದು, ನೀವು ಆಯ್ಕೆ ಮಾಡುವ ಜನಪ್ರತಿನಿಧಿಗಳ ಮೇಲೆ ನಮ್ಮ ದೇಶದ ಭವಿಷ್ಯ ಅಡಗಿರುತ್ತದೆ. ಸರಕಾರದ ಹಣ ದುರುಪಯೋಗ ಆಗಬಾರದು. ದೇಶದ ಅಭಿವೃದ್ದಿಗೆ ಬಳಕೆಯಾಗಬೇಕು. ಇಲ್ಲವಾದರೆ ನಮ್ಮ ದೇಶ ಆರ್ಥಿಕವಾಗಿ ಹಿಂದೆ ಉಳಿಯಬೇಕಾಗುತ್ತದೆ. ಆದ್ದರಿಂದ ದೇಶದ ಉನ್ನತಿಗೆ ಕಡ್ಡಾಯವಾಗಿ ತಾವು ಮತದಾನ ಮಾಡುವುದರ ಜೊತೆಗೆ ಇತರರನ್ನು ಮತದಾನ ಮಾಡುವಂತೆ ಮಾಡಬೇಕು ಎಂದರು.
ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ ಮಾತನಾಡಿ ಚುನಾವಣೆ ನಡೆಸಲು ಸರಕಾರ ಸಾಕಷ್ಟು ಹಣ ಖರ್ಚು ಮಾಡುತ್ತದೆ. ಯಾಕೆ ಅಷ್ಟೊಂದು ಹಣ ಖರ್ಚು ಮಾಡುತ್ತವೆ ಎಂಬುದನ್ನು ಅರಿಯಬೇಕು. ನಮ್ಮ ಒಂದು ಮತದಲ್ಲಿ ದೇಶದ ಭವಿಷ್ಯ ಅಡಗಿರುತ್ತದೆ. ಯಾವುದೇ ಆಮಿಷಕ್ಕೆ ಒಳಗಾಗದೇ ನೈತಿಕ ಮತದಾನ ಮಾಡಿದಾಗ ಮಾತ್ರ ದೇಶದಲ್ಲಿ ಉತ್ತಮ ಆಡಳಿತ ತರಲು ಸಾದ್ಯವಾಗುತ್ತದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ. ಮಾತನಾಡಿ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಉತ್ತಮವಾಗಿರಬೇಕಾದರೆ ನಮ್ಮನ್ನಾಳುವ ವ್ಯಕ್ತಿ ಸಚ್ಯಾರಿತ್ರö್ಯವುಳ್ಳರಾಗಿರಬೇಕು. ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಪ್ರಜ್ಞಾವಂತರೆ ಮತದಾನ ಮಾಡಲು ಮುಂದಾಗದೇ ಇರುವುದು ದುರದುಷ್ಟಕರ ಸಂಗತಿಯಾಗಿದೆ. ಇದರಿಂದ ದೇಶದ ಅಭಿವೃದ್ದಿ ಹಿನ್ನಡೆಯಾಗುತ್ತಿದ್ದು, ಪ್ರಜ್ಞಾವಂತರು ಇದನ್ನು ಅರಿವು ಮತದಾನ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿ ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ ಎಂಬುದು ಈ ವರ್ಷದ ದ್ಯೇಯವಾಗಿದೆ. ಪ್ರತಿಯೊಬ್ಬರು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮತದಾರರ ಸಾಕ್ಷರತೆ ಅಗತ್ಯವಾಗಿದೆ. ಮತದಾನದ ಪ್ರಕ್ರಿಯೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜಿ.ಪಂ ಸಿಇಓ ಶಶಿಧರ ಕುರೇರ ಹಾಗೂ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದ್ದು, ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ನಾಲ್ಕು ದಿನ ಮಹಿಳಾ ಮತ್ತು ಯುವ ಮತದಾರರ ನೋಂದಣಿಗೆ ವಿಶೇಷ ಅಭಿಯಾನ ಕೈಗೊಳ್ಳಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ಕೂಡಾ ವ್ಯಕ್ತವಾದ ಹಿನ್ನಲೆಯಲ್ಲಿ ಕಳೆದ ೨೦೨೩ರ ಕರಡು ಮತದಾರರ ಪಟ್ಟಿಯನ್ವಯ ಸಾವಿರ ಪುರುಷ ಮತದಾರರಿಗೆ ೬೮೫ ಮಹಿಳಾ ಮತದಾರರು ಇದ್ದರು. ಜನವರಿ ೨೨ ರಂದು ಹೊರಡಿಸಿದ ಅಂತಿಮ ಮತದಾರರ ಪಟ್ಟಿಯನ್ವಯ ಸಾವಿರ ಪುರುಷ ಮತದಾರರಿಗೆ ೮೭೪ ಮಹಿಳಾ ಮತದಾರರು ಹೆಚ್ಚಿಗೆ ಆಗಿರುವದನ್ನು ಕಾಣಬಹುದಾಗಿದೆ. ದೇಶದ ಪ್ರಧಾನಮಂತ್ರಿಗಿರುವ ಮತದಾನದ ಮೌಲ್ಯ ಸಾಮಾನ್ಯ ಜನರಿಗೂ ಇದೆ. ಇದನ್ನು ಅರಿವು ಮತದಾನ ಹಕ್ಕು ಚಲಾಯಿಸಲು ಮುಂದಾಗಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ, ತಹಶೀಲ್ದಾರ ಅಮರೇಶ ಪಮ್ಮಾರ, ಜಿಲ್ಲಾ ಸ್ವೀಪ್ ಐಕಾನ್ ಸಿದ್ದಾರೂಢ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.