ಚಿತ್ರದುರ್ಗ: ಕಾರಣ ಏನೇ ಇದ್ದರೂ ಅರ್ಹರಿಂದ ಮತದಾನ ಬಹಿಷ್ಕಾರ, ವಿದ್ಯಾವಂತರೇ ಪ್ರಕ್ರಿಯೆಯಿಂದ ಹೊರಗುಳಿಯುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಪತ್ರಿಕಾ ಭವನದಲ್ಲಿ ಮತದಾನ, ಚುನಾವಣಾ ನೀತಿಸಂಹಿತೆ ಕುರಿತು ಗುರುವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಮತದಾನ ಉತ್ತಮ ವಿಧಾನ. ಅಲ್ಲದೆ, ನಮ್ಮನ್ನಾಳುವ ಸಮರ್ಥ ಜನನಾಯಕನನ್ನು ಆಯ್ಕೆ ಮಾಡುವ ಮಹತ್ವದ ಕಾರ್ಯವೂ ಆಗಿದೆ. ಹೀಗಾಗಿ ಜಿಲ್ಲೆಯ ಎಲ್ಲ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಸಕ್ರಿಯವಾಗಿ ಪಾಲ್ಗೊಳ್ಳಿ. ಇತರರನ್ನು ಪ್ರೇರೇಪಿಸಿ ಎಂದು ಸಲಹೆ ನೀಡಿದರು.
ಅಕ್ರಮ ಚಟುವಟಿಕೆಗಳ ವಿರುದ್ಧ ಹದ್ದಿನ ಕಣ್ಣಿಡಲಾಗಿದೆ. ಚುನಾವಣಾ ನೀತಿಸಂಹಿತೆ ಜಾರಿ ನಂತರ ಈವರೆಗೆ ಅಬಕಾರಿ, ಪೊಲೀಸ್ ಸೇರಿ 87ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. 1 ಪ್ರಕರಣದಲ್ಲಿ 1.60 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು, ತಿದ್ದುಪಡಿ ಮಾಡಲು, ಹೆಸರಿರುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶವಿದೆ. ಇದರ ಲಾಭ ಪಡೆದುಕೊಳ್ಳಿ ಎಂದು ತಿಳಿಸಿದರು.
ಕೆಲ ತುರ್ತು ಸಂದರ್ಭಗಳಲ್ಲಿ ಇಲಾಖಾ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ ನಡೆಯಲು ಸಾರ್ವಜನಿಕರೂ ಸಹಕರಿಸಬೇಕು. ಜನರು ತಮ್ಮ ಅಹವಾಲು ಎಂದಿನಂತೆ ಜಿಲ್ಲಾಧಿಕಾರಿಗೆ ಸಲ್ಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
50ಸಾವಿರಕ್ಕಿಂತ ಹೆಚ್ಚು ಹಣದೊಂದಿಗೆ ಊರಿಂದೂರಿಗೆ ಪ್ರಯಾಣಿಸುವರು ಅಗತ್ಯ ದಾಖಲೆ ಹೊಂದಿರಬೇಕು. ಅಲ್ಲದೆ, 2ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಅಥವಾ ಸಾಗಾಟ ಪತ್ತೆಯಾದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಮಾರುತಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಪತ್ರಕರ್ತ ಸಿದ್ಧರಾಜು ಇತರರಿದ್ದರು.